Advertisement

ತೀವ್ರಗೊಂಡ ಚೀನದ ಪ್ರಚೋದನೆ; ತೈವಾನ್‌ ಜಲಸಂಧಿಯಲ್ಲಿ ಯುದ್ಧವಿಮಾನ, ನೌಕೆಗಳ ಸಂಚಾರ ಹೆಚ್ಚಳ

02:23 PM Aug 07, 2022 | Team Udayavani |

ಬೀಜಿಂಗ್‌: ಅಮೆರಿಕದ ಹೌಸ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ ವಿರುದ್ಧ ತಿರುಗಿಬಿದ್ದಿರುವ ಚೀನ ಶನಿವಾರ ಮತ್ತೆ ಪ್ರಚೋದನೆಯನ್ನು ಹೆಚ್ಚಿಸಿದೆ.

Advertisement

ಸೇನಾ ಕವಾಯತು ಹೆಸರಿನಲ್ಲಿ ತೈವಾನ್‌ ಜಲಸಂಧಿಯಲ್ಲಿ ಭಾರೀ ಸಂಖ್ಯೆಯ ಚೀನ ವಿಮಾನಗಳು ಮತ್ತು ನೌಕೆಗಳು ಸಂಚರಿಸತೊಡಗಿದ್ದು, ಅಮೆರಿಕವು ನಮ್ಮ ಮೇಲೆ ದಾಳಿ ನಡೆಸಲು ತುದಿಗಾಲಲ್ಲಿ ನಿಂತಿದೆ ಎಂದು ತೈವಾನ್‌ ಆರೋಪಿಸಿದೆ.

ಇದರ ಬೆನ್ನಲ್ಲೇ ತೈವಾನ್‌ ಕೂಡ ಸಶಸ್ತ್ರ ಪಡೆಗಳಿಗೆ ಅಲರ್ಟ್‌ ಜಾರಿ ಮಾಡಿದ್ದು, ದ್ವೀಪದ ಸುತ್ತಲೂ ವೈಮಾನಿಕ ಮತ್ತು ನೌಕಾ ಗಸ್ತು ಆರಂಭಿಸಿದೆ. ತನ್ನಲ್ಲಿರುವ ಕ್ಷಿಪಣಿ ವ್ಯವಸ್ಥೆಯನ್ನೂ ಸಕ್ರಿಯಗೊಳಿಸಿದೆ.

ಇನ್ನೊಂದೆಡೆ, ಶುಕ್ರವಾರ ರಾತ್ರಿ ಕಿನ್‌ಮೆನ್‌ ದ್ವೀಪದ ಸಮೀಪ ಚೀನಾದ್ದು ಎನ್ನಲಾದ ನಾಲ್ಕು ಡ್ರೋನ್‌ಗಳು ಹಾರಾಟ ನಡೆಸಿವೆ. ಇದು ಕಣ್ಣಿಗೆ ಬೀಳುತ್ತಿದ್ದಂತೆ ತೈವಾನ್‌ ಸೇನೆಯು ಗುಂಡಿನ ದಾಳಿ ನಡೆಸಿ, ಎಚ್ಚರಿಕೆ ನೀಡಿದೆ.

“ಪ್ರಜಾಸತ್ತಾತ್ಮಕ ತೈವಾನ್‌ಗೆ ಅಂತಾರಾಷ್ಟ್ರೀಯ ಸಮುದಾಯವು ಬೆಂಬಲ ನೀಡಬೇಕು. ಪ್ರಾದೇಶಿಕ ಭದ್ರತಾ ಪರಿಸ್ಥಿತಿಗೆ ಧಕ್ಕೆ ತರುವಂಥ ಪ್ರಚೋದನಾತ್ಮಕ ಕ್ರಮಗಳಿಗೆ ತಡೆ ತರಬೇಕು’ ಎಂದು ತೈವಾನ್‌ ಅಧ್ಯಕ್ಷರಾದ ಸೈ ಇಂಗ್‌-ವೆನ್‌ ಮನವಿ ಮಾಡಿದ್ದಾರೆ.

Advertisement

ತೈವಾನ್‌ ರಕ್ಷಣಾ ಇಲಾಖೆ ಅಧಿಕಾರಿ ಶವವಾಗಿ ಪತ್ತೆ!
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತೈವಾನ್‌ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪಾಧ್ಯಕ್ಷರಾದ ಔ ಯಾಂಗ್‌ ಲಿ-ಸಿಂಗ್‌ ಅವರು ಹೋಟೆಲ್‌ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತೈವಾನ್‌ನ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದ್ದ ಔ ಯಾಂಗ್‌ ಅವರು ಕೆಲಸದ ನಿಮಿತ್ತ ದಕ್ಷಿಣ ತೈವಾನ್‌ಗೆ ಹೋಗಿದ್ದರು. ಶನಿವಾರ ಹೋಟೆಲ್‌ ಕೊಠಡಿಯಲ್ಲಿ ಅವರ ಮೃತದೇಹ ಸಿಕ್ಕಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಚೀನ-ತೈವಾನ್‌ ನಡುವೆ ಯುದ್ಧದ ಕಾರ್ಮೋಡ ಹಬ್ಬಿರುವಾಗಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next