Advertisement

ಅರುಣಾಚಲದಲ್ಲಿ ಸೇನಾ ಕವಾಯತಿಗೆ ಚೀನ ಆಕ್ಷೇಪ

12:14 AM Oct 06, 2019 | Team Udayavani |

ಹೊಸದಿಲ್ಲಿ: ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾರತಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆ ಬೃಹತ್‌ ಕವಾಯತು ಹಮ್ಮಿಕೊಂಡಿದ್ದಕ್ಕೆ ಚೀನ ಆಕ್ಷೇಪ ವ್ಯಕ್ತಪಡಿಸಿದೆ. ಇದೇ ಮೊದಲ ಬಾರಿಗೆ ಹಿಮ್‌ ವಿಜಯ್‌ ಎಂಬ ಬೃಹತ್‌ ಕವಾಯತನ್ನು ಸೇನೆ ಹಮ್ಮಿಕೊಳ್ಳುತ್ತಿದೆ. ಒಟ್ಟು 12 ಸಾವಿರ ಸೇನಾ ಸಿಬಂದಿ ಈ ಕವಾಯತಿನಲ್ಲಿ ಭಾಗವಹಿಸಲಿದ್ದಾರೆ.

Advertisement

ಚೀನದ ಗಡಿಯಿಂದ ಕೇವಲ 100 ಕಿ.ಮೀ. ದೂರದಲ್ಲಿ ಈ ಕವಾಯತು ನಡೆಯಲಿದೆ. ತವಾಂಗ್‌ನಿಂದ ಆರಂಭವಾಗುವ ಕವಾಯತು ಹಲವು ಹಂತಗಳಲ್ಲಿ ನಡೆದು ಅ. 25ರಂದು ಮುಕ್ತಾಯಗೊಳ್ಳಲಿದೆ. ಚೀನದ ಉಪವಿದೇಶಾಂಗ ಸಚಿವ ಲೌ ಝೌಹುಯಿ ದಿಲ್ಲಿಗೆ ಕಳೆದ ವಾರ ಭೇಟಿ ನೀಡಿದಾಗ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಇನ್ನೂ ಕ್ಸಿ ಭೇಟಿ ದಿನಾಂಕವನ್ನು ನಿಗದಿಯಾಗಿಲ್ಲ.

ಚೀನ ಅಧ್ಯಕ್ಷರ ಸ್ವಾಗತಕ್ಕೆ ಭರದ ಸಿದ್ಧತೆ
ಕಾಂಚೀಪುರಂ: ತಮಿಳುನಾಡಿನ ಮಾಮಲ್ಲಪುರಂನಲ್ಲಿ ಈ ಬಾರಿಯ ಭಾರತ ಮತ್ತು ಚೀನ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಇಲ್ಲಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಮಲ್ಲಪುರಂನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದ್ದು, ಪಾರಂಪರಿಕ ತಾಣಗಳು ಅಲಂಕಾರಗೊಳ್ಳುತ್ತಿವೆ. 100ಕ್ಕೂ ಹೆಚ್ಚು ಕೆಲಸಗಾರರು ಪಾರಂಪರಿಕ ತಾಣಗಳನ್ನು ಶುಚಿಗೊಳಿಸಿ ಅಲಂಕರಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಕರ್ನಾಟಕದ ಹುಲ್ಲು ಹಾಸು: ಮಾಮಲ್ಲಪುರಂನಲ್ಲಿರುವ ಐತಿಹಾಸಿಕ ಕೃಷ್ಣಾಸ್‌ ಬಟರ್‌ಬಾಲ್‌ ಸುತ್ತ ಹಸಿರು ಹುಲ್ಲು ಹಾಸನ್ನು ಕರ್ನಾಟಕದಿಂದ ತಗೆದುಕೊಂಡು ಹೋಗಿ ಹಾಕಲಾಗುತ್ತಿದೆ. ಶೋರೆ ದೇಗುಲ ಹಾಗೂ ಕೃಷ್ಣಾಸ್‌ ಬಟರ್‌ಬಾಲ್‌ ದಾರಿಯಲ್ಲಿ ಹೊಸದಾಗಿ ಗ್ರಾನೈಟ್‌ ಹಾಸಲಾಗುತ್ತಿದೆ. ಅಷ್ಟೇ ಅಲ್ಲ, ಚೆನ್ನೈನಿಂದ ಮಾಮಲ್ಲಪುರಂ ರಸ್ತೆಗೆ ಡಾಂಬರೀಕರಣ ಮಾಡಲಾಗುತ್ತಿದ್ದು, ರಸ್ತೆ ಬದಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಗಣ್ಯರು ಚೆನ್ನೈ ವಿಮಾನ ನಿಲ್ದಾಣದಿಂದ ಮಾಮಲ್ಲಪುರಂಗೆ ರಸ್ತೆ ಮಾರ್ಗವಾಗಿ ಸಂಚರಿಸಲಿದ್ದು, ಈ ಮಾರ್ಗಕ್ಕೆ ಸಂಪೂರ್ಣ ಹೊಸ ರೂಪ ನೀಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ಸಿಎಂ ಕೆ.ಪಳನಿಸ್ವಾಮಿ ಆಗಮಿಸಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next