Advertisement

ಚೀನ ಲೋನ್‌ ಆ್ಯಪ್‌ಗಳ ಮೇಲೆ ನಿಗಾ ಹೆಚ್ಚಿರಲಿ

11:58 PM Jul 28, 2022 | Team Udayavani |

ದೇಶದಲ್ಲಿ ಮತ್ತೆ ಮತ್ತೆ ಚೀನ ಮೂಲದ ಲೋನ್‌ ಆ್ಯಪ್‌ಗ್ಳ ಹಾವಳಿ ಬಹಿರಂಗವಾಗುತ್ತಲೇ ಇದೆ. ಇದಕ್ಕೆ ಪೂರಕವೆಂಬಂತೆ, ಬುಧವಾರವಷ್ಟೇ ಬೆಂಗಳೂರಿನಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ಚೀನ ಆ್ಯಪ್‌ ಸಾಲದ ಸುಳಿಗೆ ಸಿಲುಕಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅಂದರೆ ಲೋನ್‌ ವಾಪಸಾತಿ ವೇಳೆ, ನಾನಾ ರೀತಿಯ ಕಿರುಕುಳ ನೀಡಿದ ಕಾರಣದಿಂದಲೇ ಇಂಥ ನಿರ್ಧಾರ ಕೈಗೊಂಡಿದ್ದಾರೆ.

Advertisement

ಭಾರತದಲ್ಲಿ ಇದು ಮೊದಲನೇ ಪ್ರಕರಣವೇನಲ್ಲ. ಈ ಹಿಂದೆಯೂ ಕರ್ನಾಟಕವೂ ಸೇರಿದಂತೆ ಆಂಧ್ರ, ತೆಲಂಗಾಣ, ಉತ್ತರ ಭಾರತದ ರಾಜ್ಯಗಳಲ್ಲಿಯೂ ಇಂಥ ಅಸಂಖ್ಯಾತ ಘಟನೆಗಳು ನಡೆದಿವೆ. ಕಡಿಮೆ ಭದ್ರತೆ ಮೇಲೆ ಸಾಲ ಕೊಟ್ಟು, ಮೊಬೈಲ್‌ನಲ್ಲಿರುವ ದತ್ತಾಂಶ ಗಳನ್ನು ಕಳವು ಮಾಡುವ ಈ ಆ್ಯಪ್‌ಗ್ಳನ್ನು ಇವುಗಳನ್ನೇ ಸಾಲ ಪಡೆದವರ ಮೇಲೆ ಬ್ಲ್ಯಾಕ್‌ವೆುàಲ್‌ ಮಾಡುವ ಮೂಲಕ ಸಾಲ ವಸೂಲಿ ಮಾಡುತ್ತಿವೆ. ಅದರಲ್ಲೂ ಫೋಟೋಗಳನ್ನು ಕದ್ದು, ಇವುಗಳನ್ನು ಅಶ್ಲೀಲವಾಗಿ ಚಿತ್ರಿಸಿ, ಸಾಲ ಪಡೆದವರ ಪರಿಚಯಸ್ಥರಿಗೆ ಕಳುಹಿಸಿ ಅವರ ಮಾನ ಹರಾಜು ಹಾಕುತ್ತಿರುವ ಘಟನೆಗಳೂ ವರದಿಯಾಗುತ್ತಲೇ ಇವೆ.

ಭಾರತದಲ್ಲಿ ಸದ್ಯ ಜಾರಿ ನಿರ್ದೇಶನಾಲಯವು ಚೀನ ಮೂಲದ 400 ಲೋನ್‌ ಆ್ಯಪ್‌ಗ್ಳ ಮೇಲೆ ಪ್ರಕರಣ ದಾಖಲಿಸಿದೆ. ಜತೆಗೆ ವಿದೇಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿಯೂ 50 ಕೇಸ್‌ ಹಾಕಲಾಗಿದೆ. ಗೂಗಲ್‌ನೊಂದಿಗೂ ಸಂಪರ್ಕದಲ್ಲಿರುವ ಜಾರಿ ನಿರ್ದೇಶನಾಲಯವು, ಈ ಆ್ಯಪ್‌ಗ್ಳು ಭಾರತದಿಂದಲೇ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಕುರಿತಂತೆ ಮಾಹಿತಿ ಕೇಳಿದೆ. ಸದ್ಯ ಗೂಗಲ್‌ ಇನ್ನೂ ಮಾಹಿತಿ ನೀಡಿಲ್ಲ.

ಬಹಳಷ್ಟು ಚೀನ ಮೂಲದ ಲೋನ್‌ ಆ್ಯಪ್‌ಗ್ಳು ಕಾರ್ಯನಿರ್ವಹಿಸುತ್ತಿರುವುದೇ ಅಕ್ರಮವಾಗಿ. ಕಡಿಮೆ ಭದ್ರತೆ, ಹೆಚ್ಚು ಬಡ್ಡಿಗೆ ಸಾಲ ನೀಡುವ ಇಂಥ ಆ್ಯಪ್‌ಗ್ಳು, ಒಂದು ವೇಳೆ ಸಾಲ ತೀರಿಸಿದರೂ, ಇನ್ನೂ ಸಂಪೂರ್ಣ ವಾಗಿ ಚುಕ್ತಾ ಆಗಿಲ್ಲ ಎಂದು ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಮಾಡುತ್ತಲೇ ಇವೆ. ಕಣ್ಣಿಗೆ ಕಾಣುವವರ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡಬಹುದು. ಆದರೆ ಈ ಆ್ಯಪ್‌ಗ್ಳ ಮಾಲಕರು ಎಲ್ಲಿದ್ದಾರೆ ಎಂಬುದೇ ಕೆಲವೊಮ್ಮೆ ಗೊತ್ತಿರುವುದಿಲ್ಲ. ಹೀಗಾಗಿ ಒಂದು ರೀತಿಯಲ್ಲಿ ಸೈಬರ್‌ ಅಪರಾಧಕ್ಕೆ ಒಳಗಾದಂತೆ ಅನುಭವವಾಗುತ್ತಿದೆ.

ಈ ಹಿಂದೆಯೇ ಹೇಳಿದಂತೆ, ಕೇಂದ್ರ ಸರಕಾರ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಎರಡೂ ಸೇರಿ, ಚೀನ ಮೂಲದ ಆ್ಯಪ್‌ಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಇನ್ನಷ್ಟು ಮಂದಿ ಇಂಥ ಸುಳಿಗೆ ಸಿಲುಕಿ ಜೀವ ಕಳೆದುಕೊಳ್ಳುವ ಸ್ಥಿತಿ ಬಂದರೂ ಬರಬಹುದು.

Advertisement

ಇಂಥ ವಿಚಾರದಲ್ಲಿ ಸರಕಾರದ ಜತೆಗೆ, ಜನರ ಜವಾಬ್ದಾರಿಯೂ ಹೆಚ್ಚಾಗಿಯೇ ಇರುತ್ತದೆ. ಸುಲಭ ವಾಗಿ ಸಾಲ ಸಿಗುತ್ತದೆ ಎಂಬ ಕಾರಣಕ್ಕಾಗಿ, ಕಂಡ ಕಂಡ ಆ್ಯಪ್‌ಗ್ಳಲ್ಲಿ ಪಡೆಯಬಾರದು. ಅಲ್ಲದೆ ಸಾಲ ಪಡೆಯುವಾಗ ನೀವು ಯಾವೆಲ್ಲಾ ದಾಖಲಾತಿಗಳನ್ನು ಕೊಡುತ್ತೀರಿ ಎಂಬ ಬಗ್ಗೆಯೂ ಗಮನ ಇರಬೇಕು. ಏಕೆಂದರೆ ಕಡಿಮೆ ಭದ್ರತೆಯೊಂದಿಗೆ ಹಣ ಕೊಡುತ್ತಾರೆ ಎಂದರೆ, ಅವರು ವಸೂಲಿಗಾಗಿ ಅಡ್ಡ ಮಾರ್ಗ ಹಿಡಿಯುವುದು ಖಂಡಿತ. ಇಂಥ ಆ್ಯಪ್‌ಗಳ ಮೂಲಕ ಸಾಲ ಪಡೆಯುವುದಕ್ಕಿಂತ ನಂಬಿಕಸ್ಥ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು ಸೂಕ್ತ. ಇವರು ಹೆಚ್ಚಿನ ದಾಖಲೆ ಕೇಳುತ್ತಾರೆ ಎಂದರೆ, ಇವರ ವಸೂಲಿ ಮಾರ್ಗವೂ ಉತ್ತಮವಾಗಿಯೇ ಇರುತ್ತದೆ. ಅಲ್ಲದೆ ಇವರ ಮೇಲೆ ಆರ್‌ಬಿಐನ ನಿಯಂತ್ರಣವೂ ಇರುವುದರಿಂದ ಜನರಿಗೆ ಕಿರುಕುಳ ನೀಡಲು ಸಾಧ್ಯವಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next