Advertisement

ವರ್ಣಕ್ರಾಂತಿಗೆ ಅವಕಾಶ ಬೇಡ; ಸರಕಾರ ಅಸ್ಥಿರಗೊಳಿಸಲು ಬಿಡಬೇಡಿ: ಚೀನ ಅಧ್ಯಕ್ಷ

10:44 AM Sep 17, 2022 | Team Udayavani |

ಸಮರಕಂಡ: “ವರ್ಣ ಕ್ರಾಂತಿಯ ಮೂಲಕ ನಿಮ್ಮ ದೇಶಗಳನ್ನು ಬಾಹ್ಯಶಕ್ತಿಗಳು ಅಸ್ಥಿರಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬೇಡಿ.’ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಇಂಥದ್ದೊಂದು ಕಿವಿಮಾತು ಹೇಳಿರುವುದು ಬೇರಾರೂ ಅಲ್ಲ; ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌.

Advertisement

ಶಾಂಘೈ ಸಹಕಾರ ಸಂಘ (ಎಸ್‌ಸಿಒ)ದ ಭದ್ರತಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, “ಬಾಹ್ಯ ಶಕ್ತಿಗಳು ನಮ್ಮ ದೇಶಗಳಲ್ಲಿ ವರ್ಣ ಕ್ರಾಂತಿ (ಆಡಳಿತ ವಿರೋಧಿ ಪ್ರತಿಭಟನೆ)ಗೆ ಪ್ರಚೋದನೆ ನೀಡುವುದನ್ನು ನಾವು ತಡೆಯಬೇಕು. ಕೆಲವು ಶಕ್ತಿಗಳು ಇಂಥ ಪ್ರತಿಭಟನೆ, ಚಳವಳಿಗಳಿಗೆ ಕುಮ್ಮಕ್ಕು ಕೊಟ್ಟು ಸರಕಾರಗಳನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಅದಕ್ಕೆ ನಾವು ಅವಕಾಶ ನೀಡಬಾರದು’ ಎಂದಿದ್ದಾರೆ.

ಚೀನದ ತಮ್ಮ ಆಡಳಿತಾರೂಢ ಕಮ್ಯೂನಿಸ್ಟ್‌ ಸರಕಾರ ಪತನಕ್ಕೆ ಯತ್ನ, ಮಧ್ಯಪ್ರಾಚ್ಯ ಹಾಗೂ ಹಿಂದಿನ ಸೋವಿಯತ್‌ ಯೂನಿಯನ್‌ನಲ್ಲಿನ ಸರಕಾರಗಳನ್ನು ಕೆಡವಲು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಪ್ರಜಾಪ್ರಭುತ್ವ ಪರ ಹೋರಾಟಗಾರರಿಗೆ ಕುಮ್ಮಕ್ಕು ನೀಡಿರುವುದನ್ನು ಪರೋಕ್ಷವಾಗಿ ಉಲ್ಲೇಖೀಸಿ ಅವರು ಈ ಮಾತುಗಳನ್ನಾಡಿದ್ದಾರೆ.

ಉಗ್ರನಿಗ್ರಹ ತರಬೇತಿ ಕೇಂದ್ರ: ಇದೇ ವೇಳೆ ಪ್ರಾದೇಶಿಕ ಉಗ್ರ ನಿಗ್ರಹ ತರಬೇತಿ ಕೇಂದ್ರ ಸ್ಥಾಪಿಸಲು ನಾವು ಸಿದ್ಧ ಎಂದೂ ಕ್ಸಿ ಘೋಷಿಸಿದ್ದಾರೆ. ಇಂಥ ಕೇಂದ್ರಗಳ ಸ್ಥಾಪನೆ ಮಾತ್ರವಲ್ಲದೆ 2 ಸಾವಿರ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಕಾನೂನು ಜಾರಿ ಸಾಮರ್ಥ್ಯವನ್ನು ವರ್ಧಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

ಶೆಹಬಾಜ್‌-ಜಿನ್‌ಪಿಂಗ್‌ ಭೇಟಿ: ಶೃಂಗದಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ತಮ್ಮ ದೇಶದಲ್ಲಿನ ಪ್ರವಾಹ ಸ್ಥಿತಿಯನ್ನು ವಿವರಿಸಿ, ಹವಾಮಾನ ವೈಪರೀತ್ಯಕ್ಕೆ ಕಡಿವಾಣ ಹಾಕಲು ತುರ್ತು ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಅನಂತರ ಶೆಹಬಾಜ್‌ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಪಾಕ್‌ನಲ್ಲಿ ಸಿಪೆಕ್‌ ಯೋಜನೆಯಲ್ಲಿ ತೊಡಗಿಕೊಂಡಿರುವ ಚೀನದ ಎಲ್ಲ ಸಿಬಂದಿಗೂ ಸೂಕ್ತ ರಕ್ಷಣೆ ಒದಗಿಸುವಂತೆ ಜಿನ್‌ಪಿಂಗ್‌ ಆಗ್ರಹಿಸಿದ್ದಾರೆ.

Advertisement

ಸರಕು ಸಾಗಣೆಗೆ ಮುಕ್ತ ಅವಕಾಶ ಸಿಗಲಿ
ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಡುವಿನ ಪೂರೈಕೆ ಸರಪಳಿಯು ಮತ್ತಷ್ಟು ದೃಢವಾಗಬೇಕೆಂದರೆ ಈ ಎಲ್ಲ ರಾಷ್ಟ್ರಗಳು ಪರಸ್ಪರ ಸರಕು ಸಾಗಣೆಗೆ ಅವಕಾಶ ಕಲ್ಪಿಸಬೇಕು ಎಂದು ಶೃಂಗದಲ್ಲಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಫ್ಘಾನಿಸ್ಥಾನಕ್ಕೆ ಭಾರತದಿಂದ ಸರಕುಗಳನ್ನು ಸಾಗಿಸಲು ಪಾಕಿಸ್ಥಾನವು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ. ಮೋದಿ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕ್‌ ಪಿಎಂ ಶೆಹಬಾಜ್‌ ಷರೀಫ್, “ನಾವು ಹೆಚ್ಚು ರಚನಾತ್ಮಕ ಸಂಪರ್ಕದತ್ತ ಹೆಜ್ಜೆಯಿಟ್ಟರೆ ಸರಕು ಸಾಗಣೆಗೆ ಮುಕ್ತ ಅವಕಾಶ ತನ್ನಿಂತಾನೇ ಲಭ್ಯವಾಗುತ್ತದೆ’ ಎಂದಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಅವರು ಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎಡೋìಗನ್‌ರೊಂದಿಗೂ ಮಾತುಕತೆ ನಡೆಸಿದ್ದಾರೆ.

ಪೇಚಿಗೆ ಸಿಲುಕಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್!
ರಷ್ಯಾ ಅಧ್ಯಕ್ಷ ಪುತಿನ್‌ ಜತೆಗೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧರಾಗುವ ವೇಳೆ ಇಯರ್‌ಫೋನ್‌ ಅನ್ನು ಕಿವಿಗೆ ಸಿಲುಕಿಸಲಾಗದೇ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಮಾತುಕತೆ ಆರಂಭವಾಗುವ ವೇಳೆ ಇಯರ್‌ಫೋನ್‌ ಅನ್ನು ಕಿವಿಗೆ ಸಿಲುಕಿಸಲು ಶೆಹಬಾಜ್‌ ಯತ್ನಿಸಿದರಾದರೂ ಅದು ಕೆಳಕ್ಕೆ ಬಿತ್ತು. ಮುಜುಗರಕ್ಕೊಳಗಾದ ಅವರು, “ಯಾರಾದರೂ ನನಗೆ ಸಹಾಯ ಮಾಡುತ್ತೀರಾ’ ಎಂದು ಕೇಳಿದಾಗ ಅಲ್ಲಿದ್ದ ಸಿಬಂದಿ ಬಂದು ಸರಿಪಡಿಸಿದರು. ಪಕ್ಕದಲ್ಲಿ ಕುಳಿತಿದ್ದ ಪುತಿನ್‌ ಅವರು ಇದನ್ನೆಲ್ಲ ಮುಗುಳ್ನಗುತ್ತಾ ವೀಕ್ಷಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next