ಬೀಜಿಂಗ್: ಕೊರೊನಾ ಸೋಂಕಿನ ಹೊಡೆತದ ಬಳಿಕ ಜಗತ್ತಿನ ಎಲ್ಲ ದೇಶಗಳೂ ತಮ್ಮ ಗಡಿಗಳನ್ನು ತೆರೆದು, ಆರ್ಥಿಕತೆಯನ್ನು ಮುಕ್ತಗೊಳಿಸಿದ್ದರೆ, ಚೀನ ಮಾತ್ರ “ಕೊರೊನಾ ವಿರುದ್ಧ ಶೂನ್ಯ ಸಹಿಷ್ಣು’ ನೀತಿಯನ್ನು ಪಾಲಿಸುತ್ತಾ ಕಠಿಣ ನಿರ್ಬಂಧಗಳನ್ನು ಮುಂದುವರಿಸಿದೆ.
ಪರಿಣಾಮವೆಂಬಂತೆ, ಚೀನದ ಆರ್ಥಿಕತೆಯು ಕುಸಿದುಬಿದ್ದಿದ್ದು, ಆರ್ಥಿಕ ಬಿಕ್ಕಟ್ಟಿನ ಸುಳಿಯಿಂದ ಹೊರಬರಲು ಚೀನೀಯರು ಹರಸಾಹಸ ಪಡುತ್ತಿದ್ದಾರೆ.
ಈಗ ಚೀನೀಯರು ತಮ್ಮಲ್ಲಿದ್ದ ಬೆಳೆಬಾಳುವ ರೋಲೆಕ್ಸ್ ವಾಚ್‌ಗಳು, ಹರ್ಮೀಸ್ ಬ್ಯಾಗ್‌ಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ. ಇವುಗಳನ್ನು ಮಾರಾಟ ಮಾಡಿಯಾದರೂ ಹಣ ಹೊಂದಿಸೋಣ ಎಂಬ ಲೆಕ್ಕಾಚಾರ ಅವರದ್ದು. ಇನ್ನೊಂದೆಡೆ, ಒಂದು ಕಾಲದಲ್ಲಿ ಲಕ್ಷಾಂತರ ರೂ. ಬೆಲೆಬಾಳುತ್ತಿದ್ದ ಈ ವಸ್ತುಗಳ ದರವೂ ಗಣನೀಯವಾಗಿ ಇಳಿಕೆಯಾಗಿದೆ.
ಸೆಕೆಂಡ್‌ಹ್ಯಾಂಡ್ ರೋಲೆಕ್ಸ್ ವಾಚ್‌ನ ಬೆಲೆ ಮಾರ್ಚ್‌ನಿಂದೀಚೆಗೆ ಶೇ.46ರಷ್ಟು ಇಳಿಕೆಯಾಗಿದೆ. ಶಾಂಘೈ ಲಾಕ್‌ಡೌನ್‌ಗಿಂತಲೂ 6 ತಿಂಗಳ ಮುಂಚೆ ಈ ವಾಚ್‌ನ ದರ ಶೇ.240ರಷ್ಟು ಹೆಚ್ಚಳವಾಗಿತ್ತು.
ಒಟ್ಟಿನಲ್ಲಿ ಚೀನಾದ ಆರ್ಥಿಕತೆಯು ಪತನದಂಚಿಗೆ ಸಾಗುತ್ತಿದೆ. ಇತ್ತೀಚೆಗಷ್ಟೇ ಗೋಲ್ಡ್‌ಮನ್ ಸ್ಯಾಕ್ಸ್ ಸಂಸ್ಥೆಯು ಚೀನಾದ ಆರ್ಥಿಕ ಪ್ರಗತಿ ದರದ ಅಂದಾಜನ್ನು ಶೇ.3.3ರಿಂದ ಶೇ.3ಕ್ಕಿಳಿಸಿದೆ. ನೊಮುರಾ ಸಂಸ್ಥೆಯು ಇದನ್ನು ಶೇ.2.8ಕ್ಕೆ ಇಳಿಸಿದೆ.