ಚಿಂಚೋಳಿ: ತಾಲೂಕಿನ ಶಿವರಾಮಪುರ-ಶಹಾಪುರ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಶಾದೀಪುರ ಗ್ರಾಮದ ಬಳಿ ಇರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದು ಶಾದೀಪುರ ಗ್ರಾಮಸ್ಥರು ದೂರಿದ್ದಾರೆ.
ಶಿವರಾಮಪುರ- ಶಹಾಪುರ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಕೆಲಸಕ್ಕಾಗಿ ಎಚ್.ಕೆ.ಡಿ.ಬಿ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ 2013ರಲ್ಲಿ 21 ಕೋಟಿ ರೂ. ಮಂಜೂರಿಗೊಳಿಸಲಾಗಿತ್ತು. ಆದರೆ ಶಿವರಾಪುರ, ಶಿವರೆಡ್ಡಿಪಳ್ಳಿ, ಕುಂಚಾವರಂ, ಚಿಂದಾನೂರ ತಾಂಡಾದ ವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ನಡೆಸಲಾಗಿದೆ.
ಚಿಂದಾನೂರ ತಾಂಡಾದಿಂದ ಶಾದೀಪುರ ವರೆಗಿನ 3 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಪಡಬೇಕಾಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಭಾರಿ ತೆಗ್ಗುಗಳು ಬಿದ್ದಿರುವುದರಿಂದ ದ್ಚಿಚಕ್ರ ವಾಹನ ಸವಾರರು ತೆಗ್ಗಿನಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥ ಶಾಜೀರಾವ್ ಸೂರ್ಯವಂಶಿ ತಿಳಿಸಿದ್ದಾರೆ.
ಶಾದೀಪುರ- ಚಿಂದಾನೂರ ತಾಂಡಾದ ವರೆಗೆ 3ಕಿ.ಮೀ ರಸ್ತೆ ಹದಗೆಟ್ಟಿರುವುದರಿಂದ ಚಂದುನಾಯಕ ತಾಂಡಾ, ಜವಾಹರ ನಗರ ತಾಂಡಾ, ಧನಸಿಂಗ್ ನಾಯಕ ತಾಂಡಾ, ಕುಂಚಾವರಂ, ಜಿಲವರ್ಷ ತಾಂಡಾಗಳಿಗೆ ಹೋಗುವ ಪ್ರಯಾಣಿಕರು ತೊಂದರೆ ಪಡಬೇಕಾಗಿದೆ.
ಕುಂಚಾವರಂ ಗ್ರಾಮದಿಂದ ತಾಂಡೂರ (ಕುಂಚಾವರಂ ಕ್ರಾಸ್)ವರೆಗೆ ರಸ್ತೆ ಸುಧಾರಣೆ ಮಾಡಲಾಗಿದೆ. ಆದರೆ ಶಾದೀಪುರ ಗ್ರಾಮದ ಬಳಿ ಇರುವ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಲೋಕೋಪಯೋಗಿ ಇಲಾಖೆ ಎಇಇಗೆ ತಿಳಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲವೆಂದು ಶಾದೀಪುರ ಗ್ರಾಮಸ್ಥ ರಾಮಚಂದ್ರ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಾದೀಪುರ-ಚಿಂದಾನೂರ ತಾಂಡಾದ ರಸ್ತೆ ಸುಧಾರಣೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸುತ್ತಲಿನ ತಾಂಡಾ ನಿವಾಸಿಗಳು ಶಾಸಕ ಡಾ| ಅವಿನಾಶ ಜಾಧವ ಅವರಿಗೆ ಮನವಿ ಮಾಡಿದ್ದಾರೆ.