Advertisement

ಕಾವೇರಿದ ಬೋಗಸ್‌ ಬಿಲ್‌ ಚರ್ಚೆ

10:59 AM Oct 19, 2019 | |

ಚಿಂಚೋಳಿ: ತಾಲೂಕಿನಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಬೋಗಸ್‌ ಬಿಲ್‌ಗ‌ಳನ್ನು ಪಾಸು ಮಾಡಲಾಗುತ್ತಿದೆ ಎಂದು ತಾ.ಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಗಂಭೀರ ಆರೋಪ ಮಾಡಿದರಲ್ಲದೇ, ಈ ಆಪಾದನೆ ಸುಳ್ಳಾದರೆ ರಾಜೀನಾಮೆ ನೀಡುವೆ, ಸತ್ಯವಾದರೆ ನೀವು ರಾಜೀನಾಮೆ ನೀಡುತ್ತಿರಾ ಎಂದು ಎಇಇಗೆ ಸವಾಲು ಹಾಕಿದರು.

Advertisement

ತಾ.ಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ 13ನೇ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಹಾಗೂ ಎಇಇ ಬಸವರಾಜ ನೇಕಾರ ಮಧ್ಯೆ ಈ ಕುರಿತು ಗಂಭೀರ ಚರ್ಚೆ ನಡೆಯಿತು. ಬೋಗಸ್‌ ಕಾಮಗಾರಿಗಳ ಮೇಲೆ ಬಿಲ್ಲು ತೋರಿಸಿ ಹಣ ಲೂಟಿ ಮಾಡಲಾಗುತ್ತಿದೆ. ಪರಸಂಟೇಜ್‌ ಹಣ ಕಡಿಮೆ ತಂದರೆ ಎಇಇ ಬಸವರಾಜ ಜೆಇಗಳಿಗೆ ಹೆಚ್ಚಿನ ಕಮಿಶನ್‌ ನೀಡುವಂತೆ ಒತ್ತಾಯಿಸುತ್ತಾರೆ. ಹಣ ಕೊಟ್ಟರೆ ಮಾತ್ರ ಬಿಲ್ಲು ಪಾಸು ಮಾಡುತ್ತಿದ್ದಾರೆ. ಕಡಿಮೆ ಹಣ ತಂದರೆ ನೋಟಿನ ಕಂತೆಗಳನ್ನು ಜೆಇ ಮುಖದ ಮೇಲೆ ಎಸೆದ ಉದಾಹರಣೆಗಳು ಇವೆ ಎಂದು ತಾಪಂ ಉಪಾಧ್ಯಕ್ಷರು ಆಪಾದಿಸಿದರು.

ಈ ಕುರಿತು ತನಿಖೆ ಆಗಬೇಕು ಎಂದು ಸದಸ್ಯರೆಲ್ಲ ಒತ್ತಾಯಿಸಿದಾಗ, ಎಇಇ ಬಸವರಾಜ ನೇಕಾರ ಕ್ಷಮೆಯಾಚಿಸಿ, ಸದಸ್ಯರ ಅಭಿಪ್ರಾಯದಂತೆ ಕೆಲಸ ಮಾಡುವೆ ಎಂದು ಉತ್ತರಿಸಿದರು. ತಾಲೂಕಿನಲ್ಲಿ ಬಿಸಿಎಂ ಹಾಸ್ಟೆಲ್‌ಗ‌ಳಲ್ಲಿ ಸರಕಾರದಿಂದ ಮಕ್ಕಳಿಗೆ ಯಾವ ಸೌಲಭ್ಯ ಕೊಡುತ್ತಾರೆ ಎನ್ನುವ ಕುರಿತು ನಮಗೆ ಮಾಹಿತಿ ನೀಡಿರಿ. ಮಕ್ಕಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಹಿಂದುಳಿದ ವರ್ಗಗಳ ಅಧಿಕಾರಿ ಶರಣಬಸಪ್ಪ ಪಾಟೀಲ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಸದಸ್ಯರ ಮೊಬೈಲ್‌ ಸ್ವೀಕರಿಸುವುದಿಲ್ಲ. ಇವರನ್ನು ವರ್ಗಾವಣೆ ಮಾಡಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಿರಂಜೀವಿ ಶಿವರಾಮಪುರ, ಜಗನ್ನಾಥ ಇದಲಾಯಿ ಒತ್ತಾಯಿಸಿದರು.

ರಟಕಲ್‌ ತಾ.ಪಂ ಸದಸ್ಯ ದತ್ತಾತ್ರೇಯ ಕುಲಕರ್ಣಿ ಮಾತನಾಡಿ, ರಟಕಲ್‌ ಬಿಸಿಎಂ ಹಾಸ್ಟೆಲ್‌ ಮಕ್ಕಳಿಗೆ ಕೂದಲು ಕಟಿಂಗ್‌ ಮಾಡಿಸಿಲ್ಲ. ಟ್ಯೂಶನ್‌ ಶಿಕ್ಷಕರ ಹೆಸರಿನಲ್ಲಿ ಲಕ್ಷಾಂತರ ರೂ. ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನಾಥವಾಗಿದೆ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ಮತ್ತು ಅಂಗನವಾಡಿ ಕೇಂದ್ರಗಳಿಗೆ ತತ್ತಿ ಬಾಳೆಹಣ್ಣು, ಆಹಾರ ಧಾನ್ಯ ಸರಬರಾಜಿನಲ್ಲಿ ಅಕ್ರಮ ನಡೆಯುತ್ತಿದೆ. ಕಲ್ಲೂರ ಗ್ರಾಮದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳಿವೆ. ಅಲ್ಲಿರುವುದು ಕೇವಲ 10 ಮಕ್ಕಳು ಮಾತ್ರ. ಹಾಜರಾತಿಯಲ್ಲಿ 80 ಮಕ್ಕಳ ಸಂಖ್ಯೆ ಇದೆ ಎಂದು ಮಿರಿಯಾಣ ತಾ.ಪಂ ಸದಸ್ಯ ಜಗನ್ನಾಥ ಇದಲಾಯಿ ಪ್ರಭಾರ ಸಿಡಿಪಿಒ ಪ್ರೇಮಿಳಾ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಹಲಕೋಡ-ಪೋತಂಗಲ್‌ ಗ್ರಾಮದ ಹತ್ತಿರ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿ ಕೆಂಪು ಉಸುಕು ಲೀಜ್‌ನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ಕೊಡಲಾಗಿದೆ. 10 ಟನ್‌ನ್ನು ಲಾರಿಯಲ್ಲಿ ತುಂಬಿಸಬೇಕು. ಆದರೆ ಇಲ್ಲಿ 40 ಟನ್‌ ಉಸುಕನ್ನು ಲಾರಿಗಳಲ್ಲಿ ತುಂಬಿ, ಖಾಸಗಿಯಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಶಿರೋಳಿ ತಾ.ಪಂ ಸದಸ್ಯ ವೆಂಕಟರೆಡ್ಡಿ ಪಾಟೀಲ ಸಭೆಯಲ್ಲಿ ಮುಸಾಖಾದ್ರಿ ವಿರುದ್ದ ಕಿಡಿಕಾರಿದರು.

ಸಹಕಾರಿ ಬ್ಯಾಂಕುಗಳಿಂದ ರೈತರು ಕೇವಲ ಹತ್ತು ಸಾವಿರ ಸಾಲ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಹಕಾರಿ ಬ್ಯಾಂಕಿನವರು ರೈತರ ಜಮೀನು ಪಹಣಿಯಲ್ಲಿ ಇದನ್ನು ನೋಂದಣಿ ಮಾಡುತ್ತಿದ್ದಾರೆ. ಒಂದು ಲಕ್ಷ ರೂ. ಸಾಲ ಪಡೆದುಕೊಂಡರೆ ಮಾತ್ರ ನಮೂದಿಸಬೇಕು ಎಂದು ದತ್ತಾತ್ರೇಯ ಕುಲಕರ್ಣಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ತಾ.ಪಂ ಅಧಿಕಾರಿ ಅನೀಲಕುಮಾರ ರಾಠೊಡ ಈ ಬಗ್ಗೆ ತಹಶೀಲ್ದಾರ್‌ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಡಾ| ಧನರಾಜ ಬೊಮ್ಮ, ಎಇಇ ಮಹಮ್ಮದ ಅಹೆಮದ್‌ ಹುಸೇನ್‌, ಬಸವರಾಜ ನೇಕಾರ, ಶರಣಬಸಪ್ಪ ಪಾಟೀಲ, ಸವಿತಾ ದೇಸಾಯಿ, ವೀಣಾ ಮಾನಕರ, ಉನ್ನಿಬಾಯಿ ಜಾಧವ, ಪ್ರೇಮಸಿಂಗ ಜಾಧವ, ರಾಮರಾವ ರಾಠೊಡ, ಬಲಭೀಮ ರಾಠೊಡ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next