ಚಿಂಚೋಳಿ: ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯ ಮತ್ತು ಕೆಳದಂಡೆ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದ್ದರಿಂದ ಚಂದ್ರಂಪಳ್ಳಿ ಜಲಾಶಯದಿಂದ 2 ಗೇಟ್ ಮೂಲಕ ಮಳೆ ನೀರು ನದಿಗೆ ಹರಿದು ಬಿಡಲಾಗಿದೆ ಎಂದು ಜಲಾಶಯ ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ.
ತಾಲೂಕಿನಲ್ಲಿ ಆ.31ರ ಶನಿವಾರ ಮತ್ತು ಸೆ.1ರ ಭಾನುವಾರ ರಾತ್ರಿಯಿಡೀ ಮಳೆ ಅಬ್ಬರಕ್ಕೆ ಮುಲ್ಲಾಮಾರಿ ನದಿ ಮೈದುಂಬಿ ಹರಿಯುತ್ತಿದೆ.
ತಾಲೂಕಿನ ಗಡಿ ಪ್ರದೇಶದಲ್ಲಿ ಜೋರಾಗಿ ಬಿರುಗಾಳಿ ಮಳೆಯಿಂದಾಗಿ ತೆಲಂಗಾಣ ರಾಜ್ಯದ ಸಂಪರ್ಕ ಕಲ್ಪಿಸುವ ಮಿರಿಯಾಣ ಗ್ರಾಮದಲ್ಲಿ ಸೇತುವೆಯ ಮೇಲೆ ಮಳೆನೀರು ಹರಿಯುತ್ತಿರುವ ಕಾರಣ ತಾಂಡೂರಿಗೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿದೆ. ಕನಕಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ.
ಚಿಂಚೋಳಿ ಪಟ್ಟಣದಲ್ಲಿ ಎಡೆಬಿಡದೆ ಸುರಿಯುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕರಚಖೇಡ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬನೆಲಕ್ಕೆ ಮುರಿದು ಬಿದ್ದಿದೆ.
ಕುಂಚಾವರಂ, ಐನಾಪುರ, ಸುಲೇಪೇಟ, ಕೋಡ್ಲಿ,ಚಿಂಚೋಳಿ, ಮಿರಿಯಾಣ, ಹಸರಗುಂಡಗಿ, ಗಡಿಕೇಶ್ವರ, ಕನಕಪುರ, ಚಿಮ್ಮನಚೋಡ ಗ್ರಾಮಗಳಲ್ಲಿ ಬಿರುಸಿನ ಮಳೆಯಿಂದಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿತು.
ಹೆಸರು ಬೆಳೆ ಕಟಾವು ಮಾಡಲು ತೊಂದರೆ ಆಗಿದ್ದು, ಅಬ್ಬರದ ಮಳೆ ರೈತರಿಗೆ ಆತಂಕವನ್ನುಂಟು ಮಾಡುತ್ತಿದೆ.
ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ನದಿನಾಲಾಗಳು ತುಂಬಿ ಹರಿಯುತ್ತಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿವೆ. ಅಣವಾರ, ಕಲ್ಲೂರ, ಪಟಪಳ್ಳಿ, ಎಂಪಳ್ಳಿ, ಶಾದಿಪುರ, ಮೋತಕಪಳ್ಳಿ, ಚಿಂತಪಳ್ಳಿ, ಹೊಸಹಳ್ಳಿ, ಕನಕಪುರ, ದೋಟಿಕೊಳ, ಲಿಂಗಾನಗರ, ಜವಾಹರನಗರ ತಾಂಡಾ, ಬೆನಕನಹಳ್ಳಿ, ಬಂಟನಳ್ಳಿ, ಕೊರವಿ, ಸಲಗರಬಸಂತಪುರ ಗ್ರಾಮಗಳಲ್ಲಿ ರಸ್ತೆ ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿವೆ. ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತವಾಗಿವೆ.