Advertisement

ಉಗ್ರರ ವಿಚಾರದಲ್ಲಿ ಚೀನದ ನಿಲುವು ಖಂಡನೀಯ

10:44 PM Aug 10, 2022 | Team Udayavani |

ಉಗ್ರರಿಗೆ ನೀರೆರೆದು ಸಾಕುತ್ತಲೇ ಬಂದಿರುವ ಪಾಕಿಸ್ಥಾನದ ರಕ್ಷಣೆಗೆ ನಿಂತಿರುವ ಚೀನ ಮತ್ತೆ ತನ್ನ ವಿಕೃತ ಬುದ್ಧಿಯನ್ನು ತೋರಿಸಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಪಾಕಿಸ್ಥಾನ ಮೂಲದ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿ ಎಂಬಾತನನ್ನು ಕಪ್ಪುಪಟ್ಟಿಗೆ ಸೇರಿಸಲು ಮಾಡಿದ ಪ್ರಯತ್ನಕ್ಕೆ ಚೀನ, ತನ್ನ ವಿಟೋ ಅಧಿಕಾರ ಬಳಸಿ ತಡೆದಿದೆ.

Advertisement

ಚೀನದ ಈ ದ್ವಂದ್ವ ನೀತಿ ಇದೇ ಮೊದಲೇನಲ್ಲ. ಈ ಹಿಂದಿನಿಂದಲೂ ಪಾಕಿಸ್ಥಾನದ ಬೆನ್ನಿಗೆ ನಿಂತಿರುವ ಅದು, ವಿಶ್ವಸಂಸ್ಥೆಯಲ್ಲಿ ಬಹಳಷ್ಟು ಉಗ್ರರನ್ನು ಕಪ್ಪುಪಟ್ಟಿಗೆ ಸೇರದಂತೆ ತಡೆಹಿಡಿದಿದೆ. ಅದರಲ್ಲೂ ಜಾಗತಿಕ ಉಗ್ರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕದ ಪ್ರಸ್ತಾವಕ್ಕೂ ಅದು ಸತತ ನಾಲ್ಕು ಬಾರಿ ಅಡ್ಡಕಾಲು ಹಾಕಿದೆ.

ಜಗತ್ತಿಗೇ ಕಂಟಕವಾಗಿರುವ ಉಗ್ರವಾದವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಎಲ್ಲ ದೇಶಗಳು ಒಟ್ಟಾಗಿ ಪ್ರಯತ್ನಿಸುತ್ತಿವೆ. ಆದರೆ ಜಗತ್ತಿಗೇ ಗೊತ್ತಿರುವಂತೆ ಪಾಕಿಸ್ಥಾನ ಬಹುತೇಕ ಎಲ್ಲ ಉಗ್ರರ ಆಶ್ರಯತಾಣ. ಇದಕ್ಕೆ ಅತೀ ದೊಡ್ಡ ಉದಾಹರಣೆ ಎಂದರೆ, ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ ಮತ್ತು ಮುಂಬಯಿ ಸರಣಿ ಸ್ಫೋಟದ ರೂವಾರಿ ದಾವೂದ್‌ ಇಬ್ರಾಹಿಂಗೆ ಪಾಕಿಸ್ಥಾನ ನೆಲೆ ಕೊಟ್ಟಿದ್ದು. ಅಮೆರಿಕವೇ ಬಿನ್‌ ಲಾಡೆನ್‌ನನ್ನು ಹೊಡೆದುಹಾಕಿದ್ದರೆ, ದಾವೂದ್‌ ಇಬ್ರಾಹಿಂ ಇನ್ನೂ ಪಾಕಿಸ್ಥಾನದಲ್ಲೇ ಇದ್ದಾನೆ.

ಹಾಗೆಯೇ ಮುಂಬಯಿ ದಾಳಿಯ ಉಗ್ರ ಲಷ್ಕರ್‌ ಸಂಘಟನೆಯ ಹಫೀಜ್‌ ಸಯೀದ್‌ ಕೂಡ ಇನ್ನೂ ಆ ದೇಶದಲ್ಲೇ ತಿರುಗಾಡಿಕೊಂಡಿದ್ದಾನೆ. ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನ ವಿರುದ್ಧ ಎಷ್ಟೆಲ್ಲ ಆಕ್ರೋಶಗಳಿದ್ದರೂ ಚೀನ ಮಾತ್ರ ಆ ದೇಶದ ಬೆನ್ನಿಗೆ ನಿಂತು, ಇನ್ನೂ ಸಾಕುತ್ತಲೇ ಇದೆ. ಅಲ್ಲದೆ ಸಾಲದ ರೂಪದಲ್ಲಿ ನೀಡುವ ಹಣವೂ ಈ ಉಗ್ರ ಸಂಘಟನೆಗಳಿಗೆ ಹೋದರೂ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಆದರೆ ಪಾಕಿಸ್ಥಾನದ ಉಗ್ರರು ಭಾರತದ ವಿರುದ್ಧವೇ ಸಂಚು ರೂಪಿಸಿ, ಉಗ್ರ ಕೃತ್ಯ ಮಾಡುತ್ತಾರೆ. ಇದರಿಂದ ತನಗೇ ಲಾಭ ಎಂದು ಭಾವಿಸಿದಂತಿದೆ ಚೀನ.

ಹೀಗಾಗಿಯೇ ಸದಾ ಪಾಕಿಸ್ಥಾನದ ಬೆನ್ನಿಗೆ ನಿಲ್ಲುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚೀನ ಮತ್ತು ಪಾಕಿಸ್ಥಾನದ ಈ ಕುತಂತ್ರಗಳಿಗೆ ತಕ್ಕ ಎದಿರೇಟು ನೀಡಲೇಬೇಕಾಗಿದೆ. ಮುಂದಿನ ದಿನಗಳಲ್ಲಿಯೂ ಚೀನ, ವಿಶ್ವಸಂಸ್ಥೆಯಲ್ಲಿ ತನ್ನ ವಿಟೋ ಅಧಿಕಾರ ಬಳಸಿಕೊಂಡು ಉಗ್ರರಿಗೆ ಸಹಾಯ ನೀಡುತ್ತಾ ಹೋಗಬಹುದು. ಇದನ್ನು ತಪ್ಪಿಸಲೇಬೇಕು ಎಂದಾದರೆ ವಿಶ್ವಸಂಸ್ಥೆಯಲ್ಲಿ ಸುಧಾರಣೆಯಾಗಲೇಬೇಕು.

Advertisement

ಭಾರತ, ಬ್ರೆಜಿಲ್‌, ಜಪಾನ್‌, ದಕ್ಷಿಣ ಆಫ್ರಿಕಾ ದೇಶಗಳು ಈ ಹಿಂದಿನಿಂದಲೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಯಾಗ ಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸುತ್ತಲೇ ಇವೆ. ವಿಶ್ವಸಂಸ್ಥೆ ರಚನೆಯಾದಾಗಿನಿಂದಲೂ ಇಂಥದ್ದೊಂದು ಪ್ರಯತ್ನವಾಗಲೇ ಇಲ್ಲ.

ಸದ್ಯ ಭಾರತ ಜಗತ್ತಿನಲ್ಲೇ ಎರಡನೇ ಅತೀ ದೊಡ್ಡ ಜನಸಂಖ್ಯೆ ಹೊಂದಿರುವ ದೇಶ. ಆರ್ಥಿಕವಾಗಿಯೂ ಈಗ ಅಭಿವೃದ್ಧಿ ಹೊಂದಿದ ದೇಶಗಳಿಗೆ ದೊಡ್ಡ ಸ್ಪರ್ಧೆಯನ್ನೇ ನೀಡುತ್ತಿದೆ. ಸದ್ಯ ಆರನೇ ಶ್ರೀಮಂತ ದೇಶವಾಗಿಯೂ ಭಾರತ ಗುರುತಿಸಿಕೊಂಡಿದೆ.

ಹೀಗಾಗಿ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಸ್ಥಾನ ನೀಡುವಂಥ ಸಮಯ ಬಂದಿದೆ. ಒಂದು ವೇಳೆ ಈಗ ಸುಧಾರಣೆಯಾಗದಿದ್ದರೆ, ವಿಶ್ವಸಂಸ್ಥೆ ಒಂದೆರಡು ದೇಶಗಳ ಕೈಗೊಂಬೆಯಂತಾಗುವುದು ಖಂಡಿತ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next