ವಾಷಿಂಗ್ಟನ್: ಇತ್ತೀಚೆಗೆ ಗೂಢಚಾರಿಕೆ ಉದ್ದೇಶದಿಂದ ಅಮೇರಿಕದ ವಾಯು ಪ್ರದೇಶವನ್ನು ಪ್ರವೇಶಿಸಿದ್ದ ಚೀನೀ ಬಲೂನೊಂದನ್ನು ಅಮೇರಿಕ ಅಧ್ಯಕ್ಷ ಜೋ ಬೈಡನ್ ಅವರ ಆದೇಶದ ಮೇರೆಗೆ ಫೆ.5 ರಂದು ಅಮೇರಿಕ ತನ್ನ ಕ್ಷಿಪಣಿಯಿಂದ ಹೊಡೆದುರುಳಿಸಿತ್ತು.
ಈ ಬೆನ್ನಲ್ಲೇ ಈಗ ʻವಾಷಿಂಗ್ಟನ್ ಪೋಸ್ಟ್ʼ ಮಾಡಿದ ವರದಿ ಬೆಚ್ಚಿ ಬೀಳಿಸುವಂತಿದೆ. ಚೀನೀ ಗೂಢಚಾರ ಬಲೂನು ಅಮೇರಿಕ ಮಾತ್ರವಲ್ಲದೆ ಭಾರತ, ಜಪಾನ್, ಫಿಲಿಪೈನ್ಸ್,ವಿಯೆಟ್ನಾಮ್, ತೈವಾನ್ ಮೇಲೂ ಹಾರಾಟ ನಡೆಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಹಾಕಿದೆ.
ಚೀನೀ ಗೂಢಚಾರ ಬಲೂನು ಕೆಲವು ವರ್ಷಗಳಿಂದ ಚೀನಾದ ಹೈನನ್ ಪ್ರದೇಶದ ಹೊರವಲಯದಿಂದ ನಿಯಂತ್ರಿಸಲಾಗುತ್ತಿತ್ತು. ಇದು ಸುಮಾರು ದೇಶಗಳ ಮಿಲಿಟರಿ ಮತ್ತು ಭದ್ರತೆಯ ವಿಚಾರವಾಗಿ ಬಹಳಷ್ಟು ಮಾಹಿತಿ ಸಂಗ್ರಹಿಸಿಕೊಂಡಿದೆ ಎಂದು ವಾಷಿಂಗ್ಟನ್‌ನಲ್ಲಿ ನಡೆದ 40 ದೇಶದ ರಾಯಭಾರಿಗಳ ಜೊತೆಗಿನ ಮಾತುಕತೆಯಲ್ಲಿ ಅಮೆರಿಕದ ಉಪಕಾರ್ಯದರ್ಶಿ ವೆಂಡಿ ಶೆರ್ಮನ್ ಹೇಳಿದ್ದಾರೆ.
ಚೀನೀ ಬಲೂನು ಅಮೇರಿಕ ಮಾತ್ರವಲ್ಲದೆ ಭಾರತ, ಜಪಾನ್‌ನಂತಹ ದೇಶಗಳ ಮೇಲೆ ಮತ್ತು ಕಾರ್ಯತಂತ್ರದಲ್ಲಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಮೇಲೆಯೂ ಹಾರಾಟ ನಡೆಸಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ಕೂಡಾ ವರದಿ ಮಾಡಿದೆ. ವಾಷಿಂಗ್ಟನ್ ಪೋಸ್ಟ್‌ನ ವರದಿ ಹಲವಾರು ಭದ್ರತಾ ಅಧಿಕಾರಿಗಳ ವರದಿಯನ್ನೂ ಆಧರಿಸಿದೆ ಎಂದು ಹೇಳಿದೆ.