ಬೀಜಿಂಗ್ : ಚೀನದ ದೇಶೀ ನಿರ್ಮಿತ, ಗಂಟೆಗೆ ಗರಿಷ್ಠ 400 ಕಿ.ಮೀ. ವೇಗದಲ್ಲಿ ಓಡುವ, ಮುಂದಿನ ತಲೆಮಾರಿನದ್ದೆಂದು ಹೇಳಲಾಗಿರುವ, ಬುಲೆಟ್ ರೈಲು ಇಂದು ದೇಶದ ಅತ್ಯಂತ ವಾಹನ ದಟ್ಟನೆಯ ಬೀಜಿಂಗ್ – ಶಾಂಘೈ ಲೈನಿನಲ್ಲಿ ತನ್ನ ಚೊಚ್ಚಲ ಓಡಾಟವನ್ನು ಕೈಗೊಂಡಿತು.
ದೇಶೀ ನಿರ್ಮಿತ ಫಕ್ಸಿಂಗ್ – ಸಿಆರ್ 400ಎಎಫ್ ಮಾಡೆಲ್ ಬುಲೆಟ್ ರೈಲು ಇಂದು ಬೆಳಗ್ಗೆ 11.05ರ ಹೊತ್ತಿಗೆ ಬೀಜಿಂಗ್ ದಕ್ಷಿಣ ರೈಲ್ವೇ ಸ್ಟೇಶನ್‌ನಿಂದ ನಿರ್ಗಮಿಸಿತು. ಅದೇ ಹೊತ್ತಿಗೆ ಸಿಆರ್400ಎಎಫ್ ಮಾದರಿಯ ಬುಲೆಟ್ ರೈಲು ಶಾಂಘೈ ಹಾಂಕಿಯಾವೋ ರೈಲ್ವೇ ಸ್ಟೇಶನ್‌ನಿಂದ ಬೀಜಿಂಗ್‌ಗೆ ನಿರ್ಗಮಿಸಿತು.
ಬೀಜಿಂಗ್‌ನಿಂದ ಹೊರಟ ಬುಲೆಟ್ ರೈಲು ಐದು ಗಂಟೆ 45 ನಿಮಿಷಗಳೊಳಗೆ ಶಾಂಘೈ ತಲುಪಿತು. ಶಾಂಗ್‌ಡಾಂಗ್ ಪ್ರಾಂತ್ಯದ ಜಿನಾನ್ ಮತ್ತು ತಿಯಾಂಜಿನ್ ಸೇರಿದಂತೆ, ಈ ರೈಲು ತನ್ನ ಮಾರ್ಗದಲ್ಲಿ ಒಟ್ಟು ಹತ್ತು ಕಡೆಗಳಲ್ಲಿ ನಿಲುಗಡೆ ಹೊಂದಿತ್ತು.
ಇಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ಸ್ ಎಂದು ಕರೆಯಲ್ಪಡುವ (ಇಎಂಯು) ಈ ಬುಲೆಟ್ ರೈಲು ಗಂಟೆಗೆ ಗರಿಷ್ಠ 400 ಕಿ.ಮೀ ವೇಗದಲ್ಲಿ ಮತ್ತು ನಿಯಮಿತವಾಗಿ 350 ಕಿ.ಮೀ. ವೇಗದಲ್ಲಿ ಓಡಬಲ್ಲುದು ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಸಿನ್‌ಹುವಾ ವರದಿ ಮಾಡಿದೆ.
ಬೀಜಿಂಗ್ – ಶಾಂಘೈ ನಡುವೆ ದಿನನಿತ್ಯ ಐದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಚೀನವು ವಿಶ್ವದಲ್ಲೇ ಅತಿ ಉದ್ದದ ರೈಲು ಮಾರ್ಗವನ್ನು ಹೊಂದಿದ್ದು ಕಳೆದ ವರ್ಷದ ಅಂತ್ಯದ ವೇಳೆಗಿನ ಮಾಹಿತಿಗಳ ಪ್ರಕಾರ ಚೀನದಲ್ಲಿ 22,000 ಕಿ.ಮೀ.ರೈಲು ಮಾರ್ಗ ಜಾಲವಿದೆ ಮತ್ತು ಇದು ವಿಶ್ವದ ಒಟ್ಟು ರೈಲು ಮಾರ್ಗದ ಶೇ.60 ಆಗುತ್ತದೆ !