ಬೀಜಿಂಗ್: ಕೊರೊನಾ ಬಿಕ್ಕಟ್ಟಿನ ಬಳಿಕ ಚೀನಾದ ಆರ್ಥಿಕ ಪುನಶ್ಚೇತನ ಮಂದಗತಿ ತಲುಪಿದ್ದು, ಈ ವರ್ಷ ಮೇನಲ್ಲಿ ಚೀನಾದ ರಫ್ತು ಪ್ರಮಾಣ ಶೇ.7.5ರಷ್ಟು ಕುಸಿತವಾಗಿದೆ. ಅಲ್ಲದೇ ಆಮದು ಪ್ರಮಾಣವೂ ಶೇ.4.5ರಷ್ಟು ಕಡಿಮೆಯಾಗಿದೆ. ಜಾಗತಿಕ ಬೇಡಿಕೆ ಪ್ರಮಾಣ ಇಳಿಮುಖ ಮತ್ತು ಬಡ್ಡಿದರ ಹೆಚ್ಚಳದ ಪ್ರಮಾಣವೂ ಈ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವೆಂದು ವರದಿಯೊಂದು ಬಹಿರಂಗಪಡಿಸಿದೆ. ಕಸ್ಟಮ್ಸ್ ವರದಿಗಳ ಪ್ರಕಾರ, ಏಪ್ರಿಲ್‌ನಲ್ಲಿ ಚೀನಾದ ರಫ್ತು ಪ್ರಮಾಣವು ಶೇ.8.5ರ ದಿಢೀರ್ ಏರಿಕೆಯನ್ನು ದಾಖಲಿಸಿತ್ತು.
ನಂತರದ ತಿಂಗಳಿನಲ್ಲಿ 283.5 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ. ಇದು ಕಳೆದ ವರ್ಷದ ಮೇ ತಿಂಗಳ ವರದಿಗೆ ಹೋಲಿಸಿದರೆ ಶೇ.7.5ರಷ್ಟು ಕಡಿಮೆಯಾದಂತಾಗಿದೆ. ಆಮದು ಪ್ರಮಾಣವೂ ಕೂಡ 217.7 ಶತಕೋಟಿ ಡಾಲರ್‌ಗೆ ತಲುಪಿದ್ದು, ಏಪ್ರಿಲ್ ತಿಂಗಳಿಗಿಂತಲೂ ಶೇ.7.9ರಷ್ಟು ಕಡಿಮೆಯಾಗಿದೆ. ಚೀನಾದ ಪ್ರತಿ ನಗರಗಳ ಸಮೀಕ್ಷೆಯ ಪ್ರಕಾರ 5 ಚೀನೀ ಯವಕರ ಪೈಕಿ ಓರ್ವ ನಿರೋದ್ಯೋಗಿ ಇದ್ದಾನೆಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಜನಸಂಖ್ಯೆಯಲ್ಲಿ ಹೆಜ್ಜೆ ಹಿಂದಿಟ್ಟ ಚೀನಾ, ಇದೇ ಪರಿಸ್ಥಿತಿ ಮುಂದುವರಿದರೆ ಆರ್ಥಿಕತೆಯಿಂದಲೂ ಹಿಂದೆ ಸರಿಯಬೇಕಾಗುತ್ತದೆ ಎನ್ನಲಾಗಿದೆ.