ಬೀಜಿಂಗ್:ಚೀನದಲ್ಲಿ ಕಳೆದ ತಿಂಗಳನಲ್ಲಿ ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರಿಗೆ ಲಾಕ್ ಡೌನ್ ಬಿಸಿ ಮುಟ್ಟಿದೆ. ಆದರೆ ಅಮೆರಿಕದಲ್ಲಿ ಕೋವಿಡ್ ರೂಪಾಂತರಿ ತಳಿ ಹೆಚ್ಚಳವಾಗುತ್ತಿರುವ ನಡುವೆಯೇ ವ್ಯಾಕ್ಸಿನೇಷನ್ ಅನ್ನು ತೀವ್ರಗೊಳಿಸುವ ಮೂಲಕ ಮುಂಜಾಗ್ರತೆ ವಹಿಸಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಜೆಡಿಎಸ್ ಗೆ ಹೋಗಿದ್ದಾಗ ಎಲ್ಲಿತ್ತು ಹಿಂದುತ್ವ: ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ಸೋಂಕು ಅತೀ ಕ್ಷಿಪ್ರವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ. ಅಲ್ಲದೇ ಈವರೆಗೂ ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಿರುವ ಪ್ರದೇಶಗಳಾದ ಮೊರಾಕ್ಕೊದಿಂದ ಪಾಕಿಸ್ತಾನದವರೆಗೆ ಅತೀ ಹೆಚ್ಚಿನ ಅಪಾಯವಿದೆ ಎಂದು ಎಚ್ಚರಿಸಿದೆ.
ಈ ತಿಂಗಳ ಆರಂಭದಲ್ಲಿ ರಷ್ಯಾದಿಂದ ನಾನ್ ಜಿಂಗ್ ನಗರಕ್ಕೆ ಆಗಮಿಸಿದ ವಿಮಾನಗಳನ್ನು ಸ್ವಚ್ಛಗೊಳಿಸುತ್ತಿದ್ದ ವಿಮಾನ ನಿಲ್ದಾಣದ ಕೆಲಸಗಾರರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಂತರ ರಾಜಧಾನಿ ಬೀಜಿಂಗ್ ಹಾಗೂ ಇತರ ಐದು ಪ್ರಾಂತ್ಯಗಳಿಗೆ ಸೋಂಕು ಹರಡಿರುವುದಾಗಿ ವರದಿ ವಿವರಿಸಿದೆ.
ನಾನ್ ಜಿಂಗ್ ನ ಜಿಯಾಂಗ್ಸು ಪ್ರಾಂತ್ಯದಲ್ಲಿ ಲಕ್ಷಾಂತರ ಮಂದಿ ಲಾಕ್ ಡೌನ್ ಎದುರಿಸುತ್ತಿದ್ದಾರೆ. ಅಲ್ಲದೇ ಬೀಜಿಂಗ್ ನ ಚಾಂಗ್ ಪಿಂಗ್ ಜಿಲ್ಲೆಯ 41 ಸಾವಿರ ಮಂದಿ ಮನೆಯಲ್ಲೇ ಉಳಿಯುವಂತೆ ಆದೇಶ ಹೊರಡಿಸಲಾಗಿದೆ ಎಂದು ವರದಿ ಹೇಳಿದೆ.
ಮಾಧ್ಯಮಗಳ ವರದಿ ಪ್ರಕಾರ, ಸೆಂಟ್ರಲ್ ಚೀನಾದ ಹುನಾನ್ ಪ್ರಾಂತ್ಯದ ಪ್ರವಾಸಿ ನಗರವಾದ ಝಾಂಗ್ ಜಿಯಾಜಿನಿಂದ ಬಂದ ಪ್ರವಾಸಿಗರದಲ್ಲಿಯೂ ಸೋಂಕು ಪತ್ತೆಯಾಗಿದೆ. ಇದರಲ್ಲಿ ನಾನ್ ಜಿಂಗ್ ನಿಂದ 2ಸಾವಿರಕ್ಕೂ ಅಧಿಕ ಮಂದಿ ಆ ಪ್ರದೇಶಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದೆ.
ಪೂರ್ವ ಚೀನಾದ ಶಾಂಘೈ ನಂತರ ನಾನ್ ಜಿಂಗ್ ಎರಡನೇ ಅತೀ ದೊಡ್ಡ ನಗರವಾಗಿದೆ. ಜುಲೈ 20ರಂದು ಸುಮಾರು ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.