Advertisement

ಬಾಗಿಲ ಬಳಿ ಅಲ್ಲ ದೇಶದೊಳಗೇ ಬಂದ ಚೀನಾ

02:41 PM Jun 18, 2017 | Team Udayavani |

ಧಾರವಾಡ: ಚೀನಾ ನಮ್ಮ ದೇಶದ ಬಾಗಿಲ ಬಳಿ ಮಾತ್ರವಲ್ಲ ದೇಶದೊಳಗೇ ಬಂದಿದೆ. ಅದು ಒಳಗೆ ಬಂದ ಪರಿಣಾಮ, ಪ್ರಮಾದದ ಅರಿವು ನಮಗಿಲ್ಲ ಎಂದು ನಿವೃತ್ತ ವಾಯುಸೇನಾ ಅಧಿಕಾರಿ ವಸಂತ ವಾಯಿ ಹೇಳಿದರು. ನಗರದಲ್ಲಿ ಇನ್ಸ್‌ಟ್ಯೂಟ್‌ ಆಫ್‌ ಇಂಜಿನಿಯರ್ ಸಭಾಭವನದಲ್ಲಿ ಸಶ್ರೀ ಕುಮಾಂವು ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಡ್ರಾಗನ್‌ ಆನ್‌ ಅವರ ಡೋರ್‌ ಸ್ಟೆಫ್‌’ ಕೃತಿ ಪರಿಚಯಿಸಿ ಮಾತನಾಡಿದರು. 

Advertisement

ಈ ಪುಸ್ತಕವನ್ನು ರಕ್ಷಣಾ ವಿಷಯಗಳ ನಿಯತಕಾಲಿಕೆ ಫೋರ್ಸ್‌ನ ಸಂಪಾದಕ ಪ್ರವೀಣ ಸಹಾನೆ ಹಾಗೂ ಫಜಲಾ ವಾಹನಬ್‌ ಅವರು ದೀರ್ಘ‌ ಅಧ್ಯಯನಮಾಡಿ ಬರೆದಿದ್ದಾರೆ. ದೇಶದ ನಾಯಕರು, ಜನಸಾಮಾನ್ಯರು, ಅಲ್ಲದೇ ರಕ್ಷಣಾ ಪಡೆಗಳು ಭೌಗೋಳಿಕವಾಗಿ ನಮ್ಮದು ಅತ್ಯಂತ ಸುರಕ್ಷಿತ ರಾಷ್ಟ್ರ ಎನ್ನುವ ಭ್ರಮೆಯಿಂದ ಹೊರಬರಬೇಕಾಗಿದೆ ಎಂದರು. 

ಶಾಂತಪ್ರಿಯ ರಾಷ್ಟ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ನಾವು ಬಾಹ್ಯಾಕಾಶ ಸಂಶೋಧನೆಗೆ ಮಹತ್ವ ನೀಡಿ, ರಕ್ಷಣಾ ಅವಶ್ಯಕತೆಗಳನ್ನು ಕಡೆಗಣಿಸಿದೆವು. ರಕ್ಷಣಾ ಅವಶ್ಯಕತೆಗಳಿಗಾಗಿ ಆಮದನ್ನೇ ಅವಲಂಬಿಸಿದ ನಾವು 1990ರಲ್ಲಿ ರಷ್ಯಾ ಕುಸಿದಾಗ ಎಚ್ಚತ್ತುಕೊಂಡೆವು. ಆದರೆ ಕಾಲ ಮಿಂಚಿ ಹೋಗಿತ್ತು.

ನಾವು ಸಾಮಾನ್ಯ ಸೈನಿಕನಿಗೆ ಬೇಕಾದ ರೈಫಲ್‌ನೂ° ಉತ್ಪಾದಿಸಿಲ್ಲ. ಯುದ್ಧ  ವಿಮಾನ, ನೌಕೆ, ಟ್ಯಾಂಕ್‌ ಹಾಗೂ ಇತರ ರಕ್ಷಣಾ ಸಾಮಗ್ರಿಗಳ ಮಾತಿನ ಪ್ರಶ್ನೆಯೇ ಇಲ್ಲ ಎಂದರು. ಯುದ್ಧ ವಿಮಾನ “ತೇಜಸ್‌’ 30 ವರ್ಷಗಳಿಂದ ನಿರ್ಮಾಣ ಹಂತದಲ್ಲಿಯೇ ಇದೆ. ಆಗಸ್ಟ್‌ 2016ರಲ್ಲಿ ನೌಕಾಪಡೆಯನ್ನು ಸೇರಿದ “ಅರಿಹಂತ’ ಜಲಾಂತರ್ಗಾಮಿ ನೌಕೆ ಇನ್ನೂ ಅನೇಕ ಸಮಸ್ಯೆಗಳ ಸುಳಿಯಲ್ಲಿದೆ.

ಇಂತಹ ಇನ್ನೂ ಅನೇಕ ಜಲಂತರ್ಗಾಮಿಗಳು ಭಾರತಕ್ಕೆ ಬೇಕು. ಆದರೆ ಅವುಗಳನ್ನು ಹೊಂದುವ ಆರ್ಥಿಕ ಶಕ್ತಿ ನಮಗಿಲ್ಲ. ಯುದ್ಧ ವಿಮಾನಗಳನ್ನು ಕೊಳ್ಳಲಾಗದ ನಮ್ಮ ದುರ್ಬಲ ಆರ್ಥಿಕ ಸ್ಥಿತಿಯಿಂದಾಗಿ ಭಾರತೀಯ ವಾಯು ಸೇನೆಯ ಸ್ಕಾರ್ಡನ್‌ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದರು. 

Advertisement

ಅಮೆರಿಕಾ ಮತ್ತು ಚೀನಾಗಳಿಗಿರುವ ಅಂತರಿಕ್ಷ ಉಪಗ್ರಹಗಳನ್ನು ಹೊಡೆದುರುಳಿಸುವ ಶಕ್ತಿ ಅಥವಾ ನಿಷ್ಕ್ರಿಯಗೊಳಿಸುವ ಶಕ್ತಿ ಭಾರತಕ್ಕೆ ಇಲ್ಲ. ರಕ್ಷಣಾ ಪಡೆಗಳ ಅವಶ್ಯಕತೆಗಳನ್ನು ಉತ್ಪಾದಿಸುವಲ್ಲಿ ಚೀನಾ ಬಹಳ ಮುಂದಿದೆ. ನಾವು ಇನ್ನೂ ಬಾಲಹೆಜ್ಜೆಗಳನ್ನಿಡುತ್ತಿದ್ದೇವೆ. ಸೈನಿಕ ಶಕ್ತಿ ಯುದ್ಧ ಗೆಲ್ಲುವುದಕ್ಕೆ ಮಾತ್ರವಲ್ಲ, ಯುದ್ಧವಾಗದಂತೆ ನೋಡಿಕೊಳ್ಳಲೂ ಬೇಕೆಂದರು. 

ಅಧ್ಯಕ್ಷತೆ ವಹಿಸಿದ್ದ ಮಾಜಿ ರಾಯಭಾರಿ ಮಧು ಭಾದುರಿ ಮಾತನಾಡಿ, ರಾಷ್ಟ್ರನೀತಿ ಎನ್ನುವುದು ಇರಬೇಕು. ಯಾವುದೇ ಪಕ್ಷ ಅ ಧಿಕಾರಕ್ಕೆ ಬಂದರೂ ಅದು ಬದಲಾಗಬಾರದು. ಭಾರತ ಒಂದು ಬೃಹತ್‌ ಮಾರುಕಟ್ಟೆಯ ಅವಕಾಶಗಳನ್ನು ಕಲ್ಪಿಸುತ್ತದೆ. ಈ ಮಾರುಕಟ್ಟೆ ಕೂಡ ಒಂದು ಅಸ್ತ್ರ.

ವಿದೇಶಗಳಿಗೆ ನಮ್ಮ ಮಾರುಕಟ್ಟೆಯನ್ನು ತೆರೆಯುವಾಗ ಈ ಅಂಶ ಗಮನದಲ್ಲಿರಬೇಕೆಂದರು. ಲೆ.ಜ.(ನಿ) ಎಸ್‌.ಸಿ. ಸರದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಎಸ್‌.ಜಿ. ಭಾಗವತ, ಆರ್‌.ಜಿ. ಸಿಡೇನೂರ, ನಿವೃತ್ತ ಐಎಎಸ್‌ ಅಧಿಕಾರಿ ಅಮಿತ ಭಾದುರಿ, ಡಾ| ಪ್ರಕಾಶ ಭಟ್‌, ಡಾ| ವಿಜಯ ಭಾಸ್ಕರ, ಸುರೇಖಾ ದೇವಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next