ಹೊಸದಿಲ್ಲಿ : ವಿಶ್ವ ವಾಣಿಜ್ಯ ಸಂಘಟನೆಯ ನೀತಿ-ನಿಯಮ-ನಿರ್ಧಾರಗಳನ್ನು ಸ್ವ ಹಿತಾಸಕ್ತಿಗಾಗಿ ಕಡೆಗಣಿಸಿದರೆ ಮತ್ತು ಏಕಪಕ್ಷೀಯವಾಗಿ ತನ್ನ ಸರಕುಗಳ ಮೇಲೆ ಆಮದು ಸುಂಕವನ್ನು ಹೇರಿದರೆ ತಾನು ವಾಣಿಜ್ಯ ಸಮರ ಹೂಡುವುದಾಗಿ ಚೀನ, ಅಮೆರಿಕಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
“ವಿಶ್ವ ವಾಣಿಜ್ಯ ಸಂಘಟನೆಯ ನೀತಿ-ನಿಯಮಗಳನ್ನು ಯಾವುದೇ ಸದಸ್ಯ ರಾಷ್ಟ್ರ ಸ್ವಂತ ಹಿತಾಸಕ್ತಿಗಾಗಿ ನಿರ್ಲಕ್ಷಿಸಿದರೆ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯು ಅರ್ಥಹೀನವಾಗುತ್ತದೆ. ಪರಿಣಾಮವಾಗಿ 1930ರ ದಶಕದಲ್ಲಿನ ವಾಣಿಜ್ಯ ಸಮರಗಳು ಮರುಕಳಿಸುತ್ತವೆ’ ಎಂದು ಚೀನದ ವಾಣಿಜ್ಯ ಸಚಿವಾಲಯದ ವಕ್ತಾರ ಸನ್ ಜಿವೇಯಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ವಿಶ್ವ ವಾಣಿಜ್ಯ ಸಂಘಟನೆಯ ನಿಯಮಗಳನ್ನು ಸಾರಾಸಗಟು ಕಡೆಗಣಿಸುವತ್ತ ವಾಷಿಂಗ್ಟನ್ ನಿಷ್ಠುರ ಹೆಜ್ಜೆ ಇರಿಸುತ್ತಿರುವ ಬಗ್ಗೆ ಪ್ರಕಟಗೊಂಡಿರುವ ವರದಿಗಳಿಗೆ ಸನ್ ಜಿವೇಯಿ ಅವರು ಪ್ರತಿಕ್ರಿಸುತ್ತಿದ್ದರು.
ವಿಶ್ವ ವಾಣಿಜ್ಯ ಸಂಘಟನೆಯ ನಿರ್ಧಾರಗಳಿಗೆ ಅಮೆರಿಕವು ಬದ್ಧವಾಗಿರಬೇಕಾಗಿಲ್ಲ ಎಂಬ ಅಭಿಪ್ರಾಯವನ್ನು ಒಳಗೊಂಡಿರುವ ವಾಣಿಜ್ಯ ವಾಣಿಜ್ಯ ನೀತಿ ಕಾರ್ಯಸೂಚಿಯನ್ನು ಅಮೆರಿಕದ ಹೊಸ ಸರಕಾರ ಸಂಸತ್ತಿಗೆ ಕಳುಹಿಸಿರುವ ಬಗ್ಗೆ ಚೀನ ತನ್ನ ಈ ಕಟುವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.
ಹೆಚ್ಚುತ್ತಿರುವ ಆಮದುಗಳಿಂದ ದೇಶೀಯ ಕೈಗಾರಿಕೆಗಳಿಗೆ ಗಂಭೀರ ಹಾನಿ ಉಂಟಾಗುವ ಸಂದರ್ಭದಲ್ಲಿ ಏಕಪಕ್ಷೀಯವಾಗಿ ಸುಂಕ ವಿಧಿಸುವುದಕ್ಕೆ ಅಮೆರಿಕದ ಹೊಸ ವಾಣಿಜ್ಯ ನೀತಿಯುವ ಅವಕಾಶ ಕಲ್ಪಿಸುತ್ತದೆ ಎಂದು ಸರಕಾರಿ ಒಡೆತನದ ಗ್ಲೋಬಲ್ ಟೈಮ್ಸ್ ವರದಿ ಮಾಡಿತ್ತು.