ಬೀಜಿಂಗ್/ಚೀನಾ: ಮಹಾಮಾರಿ ಕೋವಿಡ್ 19 ವಿಚಾರದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ನಡುವೆ ವಾಕ್ಸಮರ, ಜಟಾಪಟಿ ಮುಂದುವರಿದಿರುವುದು ತಿಳಿದಿರುವ ವಿಷಯ. ಇದೀಗ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡಬೇಕಾಗಿದ್ದ ಹಣಕಾಸು ನೆರವನ್ನು ತಡೆಹಿಡಿದಿದ್ದರಿಂದ ಚೀನಾ ಡಬ್ಲ್ಯುಎಚ್ ಒಗೆ ಮತ್ತೆ 30 ಮಿಲಿಯನ್ ಡಾಲರ್ ನಷ್ಟು ದೇಣಿಗೆ ನೀಡುವುದಾಗಿ ಗುರುವಾರ ಘೋಷಿಸಿದೆ.
ಜಾಗತಿಕವಾಗಿ ಕೋವಿಡ್ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ 30 ಮಿಲಿಯನ್ ಡಾಲರ್ ನಷ್ಟು ಆರ್ಥಿಕ ನೆರವು ನೀಡಲು ನಿರ್ಧರಿಸಿರುವುದಾಗಿ ಚೀನಾ ತಿಳಿಸಿದೆ. ಈಗಾಗಲೇ 20 ಮಿಲಿಯನ್ ಡಾಲರ್ ನಷ್ಟು ಚೀನಾ ದೇಣಿಗೆ ನೀಡಿತ್ತು.
ಜಾಗತಿಕವಾಗಿ ಕೋವಿಡ್ 19 ವಿರುದ್ಧ ಹೋರಾಡಲು, ಅಭಿವೃದ್ಧಿಶೀಲ ದೇಶಗಳ ಆರೋಗ್ಯ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಬೆಂಬಲ ನೀಡಲು ಈ ನೆರವು ನೀಡಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಯಾಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾ ಸರ್ಕಾರದ ಮೇಲಿನ ವಿಶ್ವಾಸ, ಬೆಂಬಲದ ಪ್ರತಿಫಲನ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜನರಿಗೆ ನೀಡಿರುವ ಕೊಡುಗೆಯಾಗಿದೆ ಎಂದು ಚೀನಾ ಬಣ್ಣಿಸಿದೆ.
ಅಮೆರಿಕ ವಿಶ್ವಆರೋಗ್ಯ ಸಂಸ್ಥೆಯ ಅತೀ ದೊಡ್ಡ ದೇಣಿಗೆ ನೀಡುವ ರಾಷ್ಟ್ರವಾಗಿದೆ. ಆದರೆ ಕೋವಿಡ್ 19 ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಕೆಲಸ ಮಾಡಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಅಲ್ಲದೇ ಆರ್ಥಿಕ ನೆರವನ್ನು ನಿಲ್ಲಿಸುವುದಾಗಿ ತಿಳಿಸಿದ್ದರು.