ಹೊಸದಿಲ್ಲಿ: ”ಚೀನಾವನ್ನು ವ್ಯೂಹಾತ್ಮಕವಾಗಿ ಎದುರಿಸಬೇಕೇ ಹೊರತು ಪೊಳ್ಳು ಹೆಗ್ಗಳಿಕೆಗಳಿಂದ ಅಲ್ಲ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರಾಖಂಡದ ಎಲ್‌ಎಸಿ ಉದ್ದಕ್ಕೂ ಚೀನಾದ ಹೊಸ ಮಿಲಿಟರಿ ನಿರ್ಮಾಣಗಳ ವರದಿಗಳ ಬಗ್ಗೆ ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿದ ಖರ್ಗೆ, ”ಚೀನಾಕ್ಕೆ ಪ್ರಧಾನಿ ಮೋದಿಯವರ ಕ್ಲೀನ್ ಚಿಟ್ ನಿಂದಾಗಿ ರಾಷ್ಟ್ರವು ಭಾರಿ ಬೆಲೆ ತೆರುತ್ತಿದೆ” ಎಂದು ಆರೋಪಿಸಿದ್ದಾರೆ.
“ಈಗ ಉತ್ತರಾಖಂಡದಲ್ಲಿರುವ ಎಲ್‌ಎಸಿಯಲ್ಲಿ ಚೀನಾದ ಮಿಲಿಟರಿ ನಿರ್ಮಾಣದ ಮೂಲಕ ನಮ್ಮ ಪ್ರಾದೇಶಿಕ ಸಮಗ್ರತೆಗೆ ಅಡ್ಡಿಯಾಗುತ್ತಿದೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಉತ್ತರಾಖಂಡದ ಗಡಿಯಲ್ಲಿರುವ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ನಿರ್ಮಾಣಗಳನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಚೀನಾದೊಂದಿಗಿನ ತನ್ನ ನೀತಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಕಾಂಗ್ರೆಸ್,ಗುರುವಾರ ಪೂರ್ವ ಲಡಾಖ್‌ನಲ್ಲಿ ಗಡಿ ಪರಿಸ್ಥಿತಿಯು ಸಾಮಾನ್ಯವಲ್ಲದಿದ್ದಾಗ ಚೀನಾದೊಂದಿಗಿನ ತನ್ನ ಸಂಬಂಧವನ್ನು ಸಾಮಾನ್ಯಗೊಳಿಸುವ ಯಾವುದೇ ನಿರೀಕ್ಷೆಯು ಆಧಾರರಹಿತವಾಗಿದೆ ಎಂದು ಹೇಳಿದೆ.