ಹೊಸದಿಲ್ಲಿ : ಇಸ್ಲಾಮಾಬಾದ್ ತನ್ನ ಶಸ್ತ್ರಾಗಾರ ಅಭಿವೃದ್ಧಿಗೆ ಸಕ್ರಿಯವಾಗಿರುವಂತೆಯೇ ಚೀನ ತನ್ನಲ್ಲಿನ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಪಾಕಿಸ್ಥಾನಕ್ಕೆ ಮಾರಿರುವುದು ಚೀನದ ಶಸ್ತ್ರಾಸ್ತ್ರ ವಾಣಿಜ್ಯ ಮಾಹಿತಿಯ ಅವರ್ಗೀಕರಣದ ಮೂಲಕ ಬಹಿರಂಗವಾಗಿದೆ.
ಪಾಕಿಸ್ಥಾನಕ್ಕೆ ಚೀನ ಮಿಲಿಟರಿ ನೆರವು ನೀಡುತ್ತಿರುವುದನ್ನು ಅಂತಾರಾಷ್ಟ್ರೀಯ ಸಮುದಾಯ ಬಹಳ ಕಾಲದಿಂದಲೂ ಶಂಕಿಸುತ್ತಾ ಬಂದಿದೆ. ಇಸ್ಲಾಮಾಬಾದ್‌ಗೆ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಮಾರಾಟ ಮಾಡುವ ಮೂಲಕ ದಕ್ಷಿಣ ಏಶ್ಯದಲ್ಲಿನ ಪ್ರಾಬಲ್ಯದ ಸಂತುಲನೆಯನ್ನು ಮಾರ್ಪಡಿಸುವ ಚೀನದ ಹುನ್ನಾರಕ್ಕೆ ಇದು ಬಲವಾದ ಸಾಕ್ಷ್ಯವನ್ನು ಒದಗಿಸಿದಂತಾಗಿದೆ.
ದಕ್ಷಿಣ ಚೀನದ ಮಾರ್ನಿಂಗ್ ಪೋಸ್ಟ್ ಮಾಡಿರುವ ವರದಿಯಲ್ಲಿ ಪಾಕಿಸ್ಥಾನ ಈಗಾಗಲೇ ಚೀನ ಕೊಟ್ಟಿರುವ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಫೈರಿಂಗ್ ರೇಂಜ್‌ನಲ್ಲಿ ಬಳಕೆಗಾಗಿ ನಿಯೋಜಿಸಿದೆ ಮತ್ತು ಆ ಮೂಲಕ ತನ್ನದೇ ಹೊಸ ಕ್ಷಿಪಣಿಯ್ನು ಅಭಿವೃದ್ಧಿಪಡಿಸಿ ಪರೀಕ್ಷಿಸಲು ಉದ್ದೇಶಿಸಿದೆ ಎಂದು ಹೇಳಿದೆ.
ಈ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಖರೀದಿಸಲು ಚೀನಕ್ಕೆ ಪಾಕಿಸ್ಥಾನ ಎಷ್ಟು ಹಣ ಪಾವತಿಸಿದೆ ಎಂಬುದು ಈಗಿನ್ನೂ ಗೊತ್ತಾಗಿಲ್ಲ. ಆದರೆ ಚೈನೀಸ್ ಅಕಾಡೆಮಿ ಆಫ್ ಸಯನ್ಸಸ್ (ಸಿಎಎಸ್) ಹೇಳುವ ಪಕ್ರಾ ಪಾಕಿಸ್ಥಾನಕ್ಕೆ ಈ ಅತ್ಯಾಧುನಿಕ ಹಾಗೂ ಸೂಕ್ಷ್ಮ ಸಂವೇದಿ ಉಪಕರಣವನ್ನು ಕೊಟ್ಟಿರುವ ಮೊದಲ ದೇಶ ಚೀನ ಆಗಿದೆ.
ವಿಶೇಷವೆಂದರೆ ಭಾರತ ಅಗ್ನಿ 5 ಐಸಿಬಿಎಂ ಕ್ಷಿಪಣಇಯನ್ನು ಪರೀಕ್ಷಾರ್ಥವಾಗಿ ಯಶಸ್ವಿಯಾಗಿ ಉಡಾಯಿಸಿದ ಕೇವಲ ಎರಡು ತಿಂಗಳ ಒಳಗಾಗಿ ಚೀನ, ಪಾಕಿಸ್ಥಾನಕ್ಕೆ ಅತ್ಯಾಧುನಿಕ ಕ್ಷಿಪಣಿ ಟ್ರ್ಯಾಕಿಂಗ್ ವವಸ್ಥೆಯನ್ನು ಮಾರಿರುವುದು ಗಮನಾರ್ಹವಾಗಿದೆ.
ಭಾರತದ ಅಗ್ನಿ 5 ಐಸಿಬಿಎಂ ಕ್ಷಿಪಣಿಯು 5,000 ಕಿ.ಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದ್ದು ಅದು ಬೀಜಿಂಗ್ ಮತ್ತು ಶಾಂಘೈಯನ್ನು ಗುರಿ ಇರಿಸಿಕೊಂಡು ದಾಳಿ ನಡೆಸಲು ಶಕ್ತವಾಗಿದೆ.