ಬೀಜಿಂಗ್: ಚೀನಾದಲ್ಲಿ ಕೋವಿಡ್ ರಣಕೇಕೆ ಮುಂದುವರಿದಿದ್ದು, ಒಂದೇ ದಿನದಲ್ಲಿ 37 ಲಕ್ಷ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಇದು ಒಂದೇ ದಿನದಲ್ಲಿ ಪತ್ತೆಯಾದ ಅತ್ಯಧಿಕ ಪ್ರಕರಣವಾಗಿದೆ ಎಂದು ಬ್ಲೂಮ್ ಬರ್ಗ್ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿನ ಸಾರಿಗೆ ಸಿಬಂದಿ ಮತ್ತು ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ
ಈ ವರ್ಷದ ಡಿಸೆಂಬರ್ ತಿಂಗಳ ಮೊದಲ 20 ದಿನಗಳಲ್ಲಿ ಚೀನಾದಲ್ಲಿ ಅಂದಾಜು 248 ಮಿಲಿಯನ್ ಜನರು ಕೋವಿಡ್ ಸೋಂಕಿಗೆ ಒಳಗಾಗಿರಬಹುದು ಎಂದು ವರದಿ ಅಂದಾಜಿಸಿದೆ.
ಈ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ನಿರಂತರ ಸಭೆಗಳನ್ನು ನಡೆಸುತ್ತಿರುವುದಾಗಿ ಬ್ಲೂಮ್ ಬರ್ಗ್ ವರದಿ ಮಾಡಿದೆ. ಡಿಸೆಂಬರ್ 20ರಂದು ಬರೋಬ್ಬರಿ 37 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ವರದಿ ವಿವರಿಸಿದೆ.
ಚೀನಾ ಶೂನ್ಯ ಕೋವಿಡ್ ನೀತಿಯನ್ನು ಜಾರಿಗೊಳಿಸಿದ ವಾರಗಳ ನಂತರ ಕೋವಿಡ್ ಪ್ರಕರಣಗಳು ತೀವ್ರ ಉಲ್ಬಣಗೊಂಡಂತಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಪರಿಣಾಮ ಚೀನಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಮುಂಬರುವ ದಿನಗಳಲ್ಲಿ ಚೀನಾದಲ್ಲಿ ಸೋಂಕಿಗೆ ಒಳಗಾಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ವೈರಾಣು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ವೈರಸ್ ನಿಂದಾಗಿ ಲಕ್ಷಾಂತರ ಮಂದಿ ಸಾವು ಸಂಭವಿಸಬಹುದು ಎಂದು ತಿಳಿಸಿದೆ.