ವಾಷಿಂಗ್ಟನ್: ಅಮೆರಿಕ ಈವರೆಗೆ ಎದುರಿಸಿದ ಅತ್ಯಂತ ಬಲಿಷ್ಠ ಹಾಗೂ ಚತುರ ಶತ್ರುವೆಂದರೆ ಅದು ಚೀನ. ಅಂಥ ಚೀನವನ್ನು ನಿರ್ಲಕ್ಷಿಸಿ, ನಮ್ಮ ನೆಲದಲ್ಲೇ, ನಮ್ಮನ್ನೇ ಬೇಹುಗಾರಿಕೆ ಮಾಡುವ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಅಕ್ಷಮ್ಯ ಎಂದು ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.
ಭಾರತೀಯ ಮೂಲದ ಪ್ರಖ್ಯಾತ ಅಮೆರಿಕನ್ ರಾಜಕಾರಣಿ ನಿಕ್ಕಿ, ರಾಷ್ಟ್ರೀಯ ಹಿತಾಸಕ್ತಿಗಳ ಕುರಿತಾದ ಭಾಷಣದಲಿ ನಮ್ಮ ನೆಲದಲ್ಲಿ, ನಮ್ಮ ನೆತ್ತಿಯ ಮೇಲೆ ಚೀನದ ಬೇಹು ಬಲೂನ್ ನಮ್ಮನ್ನು ಬೇಹುಗಾರಿಕೆ ಮಾಡುವ ದಿನ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದಿದ್ದಾರೆ. ಇಷ್ಟೆಲ್ಲದರ ಬಳಿಕವೂ ಬೈಡೆನ್ ಸರಕಾರ ಚೀನವನ್ನು ತನ್ನಷ್ಟಕ್ಕೆ ಪುಂಡಾಟ ಮಾಡಲು ಬಿಟ್ಟುಬಿಟ್ಟಿದೆ.
ಇದರಿಂದ ಅಮೆರಿಕದ ಯುಗಾಂತ್ಯವಾಯಿತು ಎಂದು ಚೀನ ಭಾವಿಸಿರಬಹುದು. ಆದರೆ, ಯುಗಾಂತ್ಯವಾದದ್ದು ಕೇವಲ ರಾಜಕಾರಣಿಗಳದ್ದು, ಅಮೆರಿಕದ್ದಲ್ಲ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದೂ ಚೀನಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.