ಬೀಜಿಂಗ್: ತೈವಾನ್ ವಿಚಾರದಲ್ಲಿ ಈಗಾಗಲೇ ಅಮೆರಿಕದ ಮೇಲೆ ಕೆಂಡಾಮಂಡಲವಾಗಿರುವ ಚೀನಾ, ಈಗ ಮತ್ತೂಮ್ಮೆ ಸಿಡಿಮಿಡಿಗೊಂಡಿದ್ದು, ತೈವಾನ್ ಜತೆಗೆ ವ್ಯಾಪಾರ ಒಪ್ಪಂದಮಾಡಿಕೊಳ್ಳುವ ಅಮೆರಿಕದ ಯೋಜನೆಯನ್ನು ಖಂಡಿಸಿದೆ.
“ಚೀನಾದ ಒಂದು ಭಾಗವಾಗಿಯೇ ಇದ್ದು, ಸ್ವತಂತ್ರ ಆಡಳಿತ ಹೊಂದಿರುವ ತೈವಾನ್ ಜತೆಗೆ ಅಮೆರಿಕ ನೇರ ಸಂಪರ್ಕ ಸಾಧಿಸುತ್ತಿದೆ. ಈ ಮೂಲಕ ತೈವಾನ್ ಸ್ಥಾನಮಾನಗಳಿಗೆ ಸಂಬಂಧಿಸಿದ ನಿಯಮವನ್ನು ಅಮೆರಿಕ ಉಲ್ಲಂ ಸಿದೆ. ಈಗ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವ ಮೂಲಕ ಚೀನಾದ ನೀತಿಗೂ ಧಕ್ಕೆ ತರುತ್ತಿದೆ.
ಇಂಥ ಹೆಜ್ಜೆಗಳಿಂದ ಅಮೆರಿಕ ಹಿಂದೆ ಸರಿಯಬೇಕು ಹಾಗೂ ತೈವಾನ್ ಕೂಡ ಇಂಥ ಬೆಳವಣಿಗೆಗಳಿಗೆ ಆಸ್ಪದ ನೀಡುವುದು ಸರಿಯಲ್ಲ’ ಎಂದು ಚೀನಾ ವಿದೇಶಾಂಗ ಸಚಿವ ಮಾಓ ನಿಂಗ್ ತಿಳಿಸಿದ್ದಾರೆ.
ಇಷ್ಟೇ ಅಲ್ಲದೇ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಯನ್ನು ಸ್ಥಗಿತಗೊಳಿಸದೇ ಹೋದಲ್ಲಿ ತೈವಾನ್ ಮೇಲೆ ಚೀನಾ ಬಲಪ್ರಯೋಗಿಸುವುದು ಅನಿವಾರ್ಯವಾಗಬಹುದು ಎನ್ನುವಂಥ ಮಾತುಗಳೂ ಕೇಳಿಬಂದಿವೆ. ಏತನ್ಮಧ್ಯೆ, ಅಮೆರಿಕದ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ತೈವಾನ್ ಸಿದ್ದವಾಗಿದ್ದು, ಈ ಒಪ್ಪಂದ ನಿಯಮಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಹೇಳಿಕೊಂಡಿದೆ.