Advertisement

ಚೀನಾದ ಕಾಶ್ಮೀರ ಕಿತಾಪತಿ; ಪ್ರವೇಶ ಮಾಡ್ತೇವೆ ಎಂದ ಅಲ್ಲಿನ ಪತ್ರಿಕೆ

10:11 AM May 03, 2017 | |

ನವದೆಹಲಿ/ಶ್ರೀನಗರ/ಬೀಜಿಂಗ್‌: ಕಣಿವೆ ರಾಜ್ಯದಲ್ಲಿ ಹಿಂಸಾಚಾರ, ಘರ್ಷಣೆಗಳು, ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವ ನಡುವೆಯೇ ಕಾಶ್ಮೀರ ವಿವಾದ ಬಗೆಹರಿಸುವ ವಿಚಾರದಲ್ಲಿ ಭಾರತ-ಪಾಕ್‌ ನಡುವೆ ಮಧ್ಯಸ್ಥಿಕೆ ವಹಿಸಲು ತನಗೆ ಎಲ್ಲ ರೀತಿಯ ಹಕ್ಕಿದೆ ಎಂದು ಚೀನಾ ಹೇಳಿದೆ.

Advertisement

ಈ ಬಗ್ಗೆ ಅಲ್ಲಿನ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ. ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷೆಯ ಆರ್ಥಿಕ ಕಾರಿಡಾರ್‌ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಾದುಹೋಗಲಿದ್ದು, ಈ ಯೋಜನೆಗಾಗಿ ಚೀನಾ ಸುಮಾರು 50 ಶತಕೋಟಿ ಡಾಲರ್‌ ಹೂಡಿಕೆ ಮಾಡಿದೆ. ಈ ಯೋಜನೆಯು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಸಾಗಬೇಕೆಂದರೆ, ಪ್ರಾದೇಶಿಕ ಸಂಘರ್ಷಗಳು ಇರಬಾರದು. ಹೀಗಾಗಿ, ಚೀನಾವು ಭಾರತ ಮತ್ತು ಪಾಕ್‌ ನಡುವಿನ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲು ಮುಂದಾಗಿದೆ. ಇದು ದೊಡ್ಡ ಸವಾಲಾಗಿದ್ದರೂ, ಸ್ವಹಿತಾಸಕ್ತಿಗಾಗಿಯಾದರೂ ಇದನ್ನು ಮಾಡಲೇಬೇಕಿದೆ ಎಂದು ಗ್ಲೋಬಲ್‌ ಟೈಮ್ಸ್‌ನ ಲೇಖನ ತಿಳಿಸಿದೆ.

ಈ ಹಿಂದೆ ರೋಹಿಂಗ್ಯಾ ನಿರಾಶ್ರಿತರ ವಿಚಾರದಲ್ಲಿ ಮ್ಯಾನ್ಮಾರ್‌ ಮತ್ತು ಬಾಂಗ್ಲಾದೇಶದ ನಡುವೆ ಮಧ್ಯಸ್ಥಿಕೆ ವಹಿಸಿ, ಸಮಸ್ಯೆಯನ್ನು ಪರಿಹರಿಸಿತ್ತು. ಇತರೆ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬಾರದು ಎಂಬ ಸಿದ್ಧಾಂತಕ್ಕೆ ಚೀನಾ ಯಾವತ್ತೂ ಬದ್ಧವಾಗಿದೆ. ಆದರೆ, ತನ್ನದೇ ದೇಶದ ಹೂಡಿಕೆದಾರರ ಹಿತಾಸಕ್ತಿಯ ಪ್ರಶ್ನೆ ಬಂದಾಗ ಕಣ್ಣುಮುಚ್ಚಿ ಕುಳಿತುಕೊಳ್ಳಲೂ ಆಗುವುದಿಲ್ಲ ಎಂದು ಲೇಖನದಲ್ಲಿ ಪ್ರತಿಪಾದಿಸಲಾಗಿದೆ.

ಅಮಾನುಷ ಕೃತ್ಯಕ್ಕೆ ತೀವ್ರ ಪ್ರತಿಭಟನೆ ಸಲ್ಲಿಸಿದ ಭಾರತ
ಭಾರತದ ಇಬ್ಬರು ಯೋಧರ ಶಿರಚ್ಛೇದ ಪ್ರಕರಣವನ್ನು ಭಾರತವು ಮಂಗಳವಾರ ಪಾಕಿಸ್ತಾನದೊಂದಿಗೆ ಪ್ರಸ್ತಾಪಿಸಿದ್ದು, ಹೇಡಿತನದ ಮತ್ತು ಅಮಾನುಷ ಕೃತ್ಯಕ್ಕೆ ತೀವ್ರ ಪ್ರತಿಭಟನೆ ಸಲ್ಲಿಸಿದೆ. ಸೇನಾ ಕಾರ್ಯಾಚರಣೆಯ ಪ್ರಧಾನ ನಿರ್ದೇಶಕ(ಡಿಜಿಎಂಒ) ಭಟ್‌ ಅವರು ಪಾಕ್‌ ಡಿಜಿಎಂಒ ಮೇಜರ್‌ ಜ. ಸಾಹಿರ್‌ ಶಂಶಾದ್‌ ಮಿರ್ಜಾ ಜತೆ ಹಾಟ್‌ಲೆçನ್‌ ಮೂಲಕ ಮಾತುಕತೆ ನಡೆಸಿ, “ನಿಮ್ಮ ಸೇನೆ ಮಾಡಿದ ಕೃತ್ಯವು ಕನಿಷ್ಠ ನಾಗರಿಕ ಪ್ರಜ್ಞೆಯನ್ನೂ ಮೀರಿದ್ದು, ಇದು ನಿಸ್ಸಂದೇಹವಾಗಿ ಖಂಡಿಸುವಂಥ ವಿಚಾರ. ಈ ಪೈಶಾಚಿಕ ಕೃತ್ಯದ ಕುರಿತು ಪ್ರತಿಕ್ರಿಯೆ ನೀಡಿ,’ ಎಂದು ಆಗ್ರಹಿಸಿದ್ದಾರೆ.

ಆದರೆ, ನೀಚ ಕೃತ್ಯವೆಸಗಿದ್ದರೂ ಉದ್ಧಟತನ ಮುಂದುವರಿಸಿರುವ ಪಾಕಿಸ್ತಾನ, “ನಮ್ಮ ಯೋಧರು ಭಾರತದ ಗಡಿ ದಾಟಿ ಹೋಗಿ ಶಿರಚ್ಛೇದ ಮಾಡಿದರು ಎಂಬ ಆರೋಪಕ್ಕೆ ಸಂಬಂಧಿಸಿ ಸೂಕ್ತ ಸಾಕ್ಷ್ಯಗಳನ್ನು ಒದಗಿಸಿ’ ಎಂದು ಭಾರತವನ್ನು ಒತ್ತಾಯಿಸಿದೆ. ಕಾಶ್ಮೀರದಲ್ಲಿನ ಹಿಂಸಾಚಾರದಿಂದ ಅಂತಾರಾಷ್ಟ್ರೀಯ ಸಮುದಾಯದ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಭಾರತವು ಈ ಕಥೆ ಕಟ್ಟಿದೆ. ನಮ್ಮವರು ಕದನ ವಿರಾಮ ಉಲ್ಲಂ ಸಿಯೂ ಇಲ್ಲ, ಗಡಿ ದಾಟಿ ಹೋಗಿಯೂ ಇಲ್ಲ ಎಂದು ಪಾಕ್‌ ಡಿಜಿಎಂಒ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next