ಬೀಜಿಂಗ್: ಕೋವಿಡ್-19 ಸೋಂಕಿನ ವಿಚಾರವನ್ನು ಚೀನ ಬಹಿರಂಗ ಪಡಿಸುವುದಕ್ಕೂ ಮುನ್ನವೇ ವುಹಾನ್ ಪ್ರಯೋಗಾಲಯದ ಮೂವರು ಸಂಶೋಧಕರು ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದಿದ್ದರು ಎಂಬ ಸುದ್ದಿಯನ್ನು ಚೀನಾ ಅಲ್ಲಗಳೆದಿದೆ. ಇದು ಸಂಪೂರ್ಣ ಸುಳ್ಳು ಎಂದಿದೆ.
2019 ನವೆಂಬರ್‌ನಲ್ಲೇ ಈ ಸಂಶೋಧಕರು ಚಿಕಿತ್ಸೆ ಪಡೆದಿರುವ ದಾಖಲೆಗಳನ್ನು ಉಲ್ಲೇಖೀಸಿ “ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿತ್ತು.
ಅಮೆರಿಕವು ವೈಭವೀಕೃತ ವರದಿ ಮಾಡುತ್ತಿದೆ. ಸೋಂಕು ಬಹಿರಂಗವಾಗುವುದಕ್ಕೂ ಮುನ್ನ ಚೀನದ ಸಂಶೋಧಕರು ಕೊರೊನಾಕ್ಕೆ ಚಿಕಿತ್ಸೆ ಪಡೆದಿದ್ದರು ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಚೀನದ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯನ್ ಹೇಳಿದ್ದಾರೆ. ಜತೆಗೆ ಅಮೆರಿಕಕ್ಕೆ ನಿಜಕ್ಕೂ ಕೊರೊನಾದ ಮೂಲ ಕಂಡುಹಿಡಿಯುವ ಉದ್ದೇಶವಿದೆಯೋ ಅಥವಾ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿದೆಯೋ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಆ್ಯಂಟಿಗುವಾದಿಂದಲೂ ನಾಪತ್ತೆ!
ಚೀನ ಸರಕಾರವು ತನ್ನಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಜಗಜ್ಜಾಹೀರು ಮಾಡಿದ್ದು 2019ರ ಡಿಸೆಂಬರ್‌ನಲ್ಲಿ. ಆದರೆ ಅದಕ್ಕೂ ಒಂದು ತಿಂಗಳ ಮುನ್ನ, 2019ರ ನವೆಂಬರ್ ನಲ್ಲೇ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರಿಗೆ ಜ್ವರ ಬಂದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು ಎಂದು ಅಮೆರಿಕದ ಗುಪ್ತ ಚರ ವರದಿ ತಿಳಿಸಿತ್ತು. ಅಲ್ಲದೆ ಲ್ಯಾಬ್‌ನಲ್ಲಿರುವ ಹಲವು ಸಿಬಂದಿ ಅನಾರೋಗ್ಯಕ್ಕೀಡಾಗಿದ್ದು, ಅವರ ಸಂಖ್ಯೆಎಷ್ಟು ಎಂಬ ನಿಖರ ಮಾಹಿತಿ ಸಿಕ್ಕಿಲ್ಲ ಎಂದೂ ಹೇಳಲಾಗಿತ್ತು.