ವಾಷಿಂಗ್ಟನ್:ಲಡಾಖ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಅಂಕಿ ಅಂಶ ಮುಚ್ಚಿಟ್ಟಿದ್ದ ಚೀನಾ ಇದೀಗ ಆ ವಿಷಯ ಹೊರಬಾರದಂತೆ ನೋಡಿಕೊಂಡಿರುವ ಕರಾಳ ಮುಖ ಕೂಡಾ ಅಮೆರಿಕ ಗುಪ್ತಚರ ಇಲಾಖೆ ನೀಡಿರುವ ವರದಿಯಲ್ಲಿ ಬಟಾಬಯಲಾಗಿದೆ!
ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಸಾವನ್ನಪ್ಪಿರುವ ಸೈನಿಕರ ಅಂತ್ಯ ಸಂಸ್ಕಾರ ನಡೆಸದಿರುವಂತೆ ಕುಟುಂಬಸ್ಥರ ಮೇಲೆ ಚೀನಾ ಸರ್ಕಾರ ಒತ್ತಡ ಹೇರಿದ್ದು, ಸರ್ಕಾರವೇ ಖುದ್ದು ರಹಸ್ಯವಾಗಿ ಅಂತ್ಯ ಸಂಸ್ಕಾರ ನಡೆಸಿರುವುದಾಗಿ ಅಮೆರಿಕ ಗುಪ್ತಚರ ವರದಿ ತಿಳಿಸಿದೆ.
ಜೂನ್ 15ರಂದು ಲಡಾಖ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಮಾತುಕತೆ ತೆರಳಿದ್ದ ಭಾರತೀಯ ಸೈನಿಕರ ಮೇಲೆ ಚೀನಾ ಯೋಧರು ಕಲ್ಲು, ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪರಿಣಾಮ ಇಪ್ಪತ್ತು ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆದರೆ ಈ ಸಂಘರ್ಷದಲ್ಲಿ ಭಾರತೀಯ ಯೋಧರ ಪ್ರತಿರೋಧಕ್ಕೆ 40ಕ್ಕೂ ಅಧಿಕ ಚೀನಾ ಯೋಧರು ಸಾವನ್ನಪ್ಪಿರುವುದಾಗಿ ತಿಳಿಸಲಾಗಿತ್ತು. ಕೊನೆಯವರೆಗೂ ಚೀನಾ ಸೇನೆ ತನ್ನ ಸೈನಿಕರ ಸಾವಿನ ಅಂಕಿ
ಅಂಶವನ್ನು ಬಹಿರಂಗಗೊಳಿಸಿರಲಿಲ್ಲವಾಗಿತ್ತು.
ಜೂನ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಗಡಿಯಲ್ಲಿ ಮಡಿದ ವೀರ ಯೋಧರ ಹೋರಾಟವನ್ನು ಕೊಂಡಾಡಿದ್ದರು. ಅಲ್ಲದೇ ಅವರ ಹೋರಾಟದ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದರು. ಗಡಿಯಲ್ಲಿ ಹೋರಾಡಿದ ಯೋಧರ ಕುಟುಂಬ ನಿಜಕ್ಕೂ ಪೂಜನೀಯಕ್ಕೆ ಅರ್ಹರಾದವರು ಎಂದು ಗುಣಗಾನ ಮಾಡಿದ್ದರು. ಆದರೆ ಚೀನಾ ಮಾತ್ರ ಎಷ್ಟು ಮಂದಿ ಯೋಧರು ಸಾವನ್ನಪ್ಪಿದ್ದರು ಎಂಬುದನ್ನು ಬಹಿರಂಗಗೊಳಿಸಿರಲಿಲ್ಲ.
ಘರ್ಷಣೆಯಲ್ಲಿ ಸಾವನ್ನಪ್ಪಿದ್ದ ಚೀನಾ ಸೈನಿಕರ ಶವಗಳನ್ನು ಗುಟ್ಟಾಗಿ ಹೂತು ಹಾಕಿರುವುದಾಗಿ ವರದಿ ಆರೋಪಿಸಿದೆ. ಸೈನಿಕರ ಶವಸಂಸ್ಕಾರದ ಮೆರವಣಿಗೆಯಾಗಲಿ, ಅಂತ್ಯ ಸಂಸ್ಕಾರ ನಡೆಸದಂತೆ ಚೀನಾ ಸರ್ಕಾರ ಒತ್ತಡ ಹೇರಿತ್ತು ಎಂದು ವರದಿ ಉಲ್ಲೇಖಿಸಿದೆ.