ಬೀಜಿಂಗ್: ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದ ಕೊರೊನಾ ವೈರಸನ್ನು ಸೃಷ್ಟಿಸಿದ್ದೇ ಚೀನ ಎಂಬ ಆರೋಪವಿದೆ. ಇದರ ನಡುವೆಯೇ ಮೊದಲ ಬಾರಿ ಕೊರೊನಾ ವೈರಸ್ ಪತ್ತೆಯಾದ ವುಹಾನ್ ನಗರದ ವಿಜ್ಞಾನಿಯೊಬ್ಬರು ನೀಡಿದ ಸಂದರ್ಶನ ಭಾರೀ ಸಂಚಲನ ಸೃಷ್ಟಿಸಿದೆ. 2021ರಲ್ಲಿ ಅವರು ನೀಡಿದ್ದ 26 ನಿಮಿಷಗಳ ಸಂದರ್ಶನ ಈಗ ಬಹಿರಂಗವಾಗಿದ್ದು, ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಬಳಸಲೆಂದೇ ಸೃಷ್ಟಿಸಲಾಯಿತೆಂದು ಹೇಳಿದ್ದಾರೆ.
ವುಹಾನ್ ವೈರಾಲಜಿ ಸಂಸ್ಥೆಯ (ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ) ಪ್ರಮುಖ ಸಂಶೋಧಕರೂ ಆಗಿರುವ ಚಾವೋ ಶಾನ್, ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯ ಸದಸ್ಯೆ ಜೆನ್ನಿಫರ್ ಝಾಂಗ್‌ಗೆ ಈ ಸಂದರ್ಶನ ನೀಡಿದ್ದಾರೆ. ಅದನ್ನು ಟ್ವಿಟರ್ ಮೂಲಕ ಆಕೆಯೀಗ ಬಹಿರಂಗ ಮಾಡಿದ್ದಾರೆ. ಇದು ಸಮಗ್ರ ಸತ್ಯದ ಒಂದು ತುಣುಕು ಮಾತ್ರ, ಇದನ್ನು ಎಲ್ಲ ಕಡೆಗೆ ಹಬ್ಬಿಸಿ ಎಂದು ಕರೆ ನೀಡಿದ್ದಾರೆ.
ಶಾನ್ ಹೇಳಿದ್ದೇನು?: ಚೀನ ನಾಯಕತ್ವ ಉದ್ದೇಶಪೂರ್ವಕವಾಗಿಯೇ ಕೊರೊನಾ ಸೃಷ್ಟಿಸಿದೆ. ಪ್ರಪಂಚದ ಮೇಲೆ ಅದನ್ನು ಜೈವಿಕ ಅಸ್ತ್ರವಾಗಿಯೇ ಪ್ರಯೋಗಕ್ಕೆ ಡ್ರ್ಯಾಗನ್ ಮುಂದಾಗಿತ್ತು. ನಾನು ಮತ್ತು ಸಹೋದ್ಯೋಗಿಗಳಿಗೆ ಮಾನವರೂ ಸೇರಿದಂತೆ ಜಗತ್ತಿನ ಎಲ್ಲ ವ್ಯವಸ್ಥೆಗಳಿಗೆ ಕ್ಷಿಪ್ರವಾಗಿ ಹರಡುವ ಪ್ರಬಲ ವೈರಸ್ ಗುರುತಿಸಲು ನಾಲ್ಕು ವೈರಸ್‌ಗಳನ್ನು ನೀಡಲಾಗಿತ್ತು. ಬಾವಲಿಗಳು, ಮಂಗಗಳು ಮತ್ತು ಕೆಲವು ಮಾನವರ ಮೇಲೆ ಕೂಡ ಪ್ರಯೋಗ ನಡೆಸಲಾಗಿತ್ತು ಎಂದು ಚಾನ್ ಹೇಳಿದ್ದಾರೆ.
2019ರಲ್ಲಿ ವುಹಾನ್‌ನಲ್ಲಿ ನಡೆದಿದ್ದ ವಿಶ್ವ ಮಿಲಿಟರಿ ಕ್ರೀಡಾಕೂಟದ ಸಂದರ್ಭದಲ್ಲಿ ಹಲವು ಸಹೋದ್ಯೋಗಿಗಳು ನಾಪತ್ತೆಯಾಗಿದ್ದಾರು. ಅವರಲ್ಲೊಬ್ಬರು ತಡವಾಗಿ ಪತ್ತೆಯಾಗಿದ್ದರು. ಆ ವ್ಯಕ್ತಿ ತಾನು ಮಿಲಿಟರಿ ಕ್ರೀಡಾಕೂಟದ ಸ್ಪರ್ಧಿಗಳು ತಂಗಿದ್ದ ಸ್ಥಳಕ್ಕೆ ಹೋಗಿದ್ದೆ ಎಂದಿದ್ದರು. ಆ ವ್ಯಕ್ತಿ ವೈರಸ್ ಹಬ್ಬಿಸಲೆಂದೇ ಹೋಗಿರಬಹುದು ಎಂಬ ಶಂಕೆಯನ್ನೂ ಅವರು ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.