Advertisement

ಅಂತಾರಾಷ್ಟ್ರೀಯ ಮಟ್ಟದಲ್ಲೇ ಚೀನಕ್ಕೆ ಬುದ್ಧಿ ಕಲಿಸಬೇಕು

01:40 AM Jan 05, 2022 | Team Udayavani |

ಕಳೆದ ವರ್ಷದ ಆರಂಭದಲ್ಲಿ ಗಾಲ್ವಾನ್‌ನಲ್ಲಿ ಭಾರತೀಯ ಯೋಧರಿಂದ ಪೆಟ್ಟು ತಿಂದಿದ್ದರೂ ನೆರೆಯ ಚೀನ ತನ್ನ ಕೊಳಕು ಬುದ್ಧಿ ಮಾತ್ರ ಬಿಟ್ಟಿಲ್ಲ. ಹೊಸ ವರ್ಷದ ದಿನದಂದು ಗಾಲ್ವಾನ್‌ನಲ್ಲಿಯದು ಎಂದು ಹೇಳಿಕೊಂಡ ಫೋಟೋವೊಂದನ್ನು ಬಿಡುಗಡೆ ಮಾಡಿದ್ದ ಚೀನ, ನಮ್ಮ ಒಂದಿಂಚೂ ಭೂಮಿಯನ್ನು ಬಿಡುವುದಿಲ್ಲ ಎಂದು ಹೇಳಿಕೊಂಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ, ಮಂಗಳವಾರ ಗಾಲ್ವಾನ್‌ನಲ್ಲಿ ಭಾರತೀಯ ಯೋಧರು ತ್ರಿವರ್ಣ ಧ್ವಜ ಇರಿಸಿಕೊಂಡು ಹೊಸ ವರ್ಷಾಚರಣೆ ನಡೆಸುತ್ತಿರುವ ಫೋಟೋ ಬಿಡುಗಡೆ ಮಾಡಿದೆ. ಈ ಮೂಲಕ ಗಾಲ್ವಾನ್‌ ನಮ್ಮ ವಶದಲ್ಲೇ ಇದೆ ಎಂಬ ಸಂದೇಶವನ್ನು ಚೀನಕ್ಕೆ ರವಾನಿಸಿದೆ.

Advertisement

ಚೀನದ ಈ ಮೊಂಡಾಟ ಕೇವಲ ಗಾಲ್ವಾನ್‌ಗೆà ನಿಂತಿಲ್ಲ. ಅತ್ತ ಪ್ಯಾಂಗ್ಯಾಂಗ್‌ ಸರೋವರದ ಬಳಿ ಸೇತುವೆಯೊಂದನ್ನು ನಿರ್ಮಿಸುತ್ತಿರುವ ಸ್ಯಾಟ್‌ಲೈಟ್‌ ಚಿತ್ರವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆಯೂ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗಾಲ್ವಾನ್‌ನಲ್ಲಿ ಸಂಘರ್ಷದ ಅನಂತರ ಇದುವರೆಗೆ ಉಭಯ ದೇಶಗಳ ನಡುವೆ 14 ಸುತ್ತಿನ ಮಾತುಕತೆ ನಡೆದಿದೆ. ಈ ಸಭೆಯಲ್ಲಿ ಕಾರ್ಪ್‌ ಕಮಾಂಡರ್‌ಗಳು ಸೇರಿ ಗಡಿಯಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿದ್ದಾರೆ. ಇದುವರೆಗೆ ಈ ಸಭೆಯಲ್ಲಿ ಪಾಲ್ಗೊಂಡಿರುವ ಚೀನ, ತನ್ನ ಪಟ್ಟು ಬಿಡದೇ ಮೊಂಡಾಟ ಮುಂದುವರಿಸಿದೆ. ಅಷ್ಟೇ ಅಲ್ಲ, ಪ್ಯಾಂಗ್ಯಾಂಗ್‌ ಸರೋವರದ ಬಳಿಯಿಂದ ಹಿಂದಕ್ಕೆ ಸರಿಯಲೂ ನಿರಾಕರಿಸಿದೆ. ಜತೆಗೆ ಉಭಯ ದೇಶಗಳ ನಡುವಿನ ಸಂಘರ್ಷ ಕಡಿಮೆ ಮಾಡಿಕೊಂಡು ಶಾಂತಿಯ ವಾತಾವರಣ ನಿರ್ಮಾಣ ಮಾಡುವ ಬಗ್ಗೆ ಹೇಳಿಕೊಳ್ಳುತ್ತಲೇ ತನ್ನ ಕುತ್ಸಿತ ಬುದ್ಧಿಯನ್ನು ತೋರುತ್ತಲೇ ಬಂದಿದೆ.

ಇದಕ್ಕೆ ಸಾಕ್ಷಿ ಪ್ಯಾಂಗ್ಯಾಂಗ್‌ ಸರೋವರದ ಬಳಿಕ ಸೇತುವೆ ನಿರ್ಮಾಣ ಮಾಡುತ್ತಿರುವುದು. 2020ರ ಆ.29-30ರಂದು ಭಾರತೀಯ ಸೇನೆ ಪ್ಯಾಂಗ್ಯಾಂಗ್‌ ಸರೋವರದ ಬಳಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚೀನ ಸೇನೆಯನ್ನು ಹಿಮ್ಮೆಟ್ಟಿಸಿ, ಮುಂಚೂಣಿ ನೆಲೆಗಳಲ್ಲಿ ತನ್ನ ಸೇನೆಯನ್ನು ನಿಲ್ಲಿಸಿತ್ತು. ಇದು ಚೀನದ ಹಿನ್ನಡೆಗೂ ಕಾರಣವಾಗಿತ್ತು. ಅಲ್ಲದೆ ಈಗಲೂ ಭಾರತೀಯ ಸೇನೆ ಈ ಭಾಗದಲ್ಲಿ ಸರ್ವ ಸನ್ನದ್ಧವಾಗಿ ನಿಂತಿದೆ. ಇಲ್ಲಿ ಭಾರತವನ್ನು ಸಮರ್ಥವಾಗಿ ಎದುರಿಸಬೇಕಾದರೆ, ಚೀನ, ಯಾವುದೇ ಅಡ್ಡಿ ಇಲ್ಲದೇ ತನ್ನ ಫಿಂಗರ್‌ 4ಗೆ ಬರಬಹುದು. ಹೀಗಾಗಿ ಇಲ್ಲಿ ಸೇತುವೆ ನಿರ್ಮಾಣ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಲಡಾಖ್‌ನ ಈ ಭಾಗದ ವಿವಾದ ಒಂದು ಕಡೆಯಾದರೆ, ಇನ್ನೊಂದು ಕಡೆ ಅತ್ತ ಅರುಣಾಚಲ ಪ್ರದೇಶದಲ್ಲೂ ಚೀನದ ಕೆಟ್ಟ ಬುದ್ಧಿ ಪ್ರದರ್ಶನವಾಗಿದೆ. ಅಲ್ಲಿನ ಕೆಲವೊಂದು ಹಳ್ಳಿಗಳ ಹೆಸರನ್ನೇ ಬದಲಾವಣೆ ಮಾಡಿದೆ. ಆದರೆ ಈ ಬೆಳವಣಿಗೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಭಾರತ, ಇಂಥ ಯಾವುದೇ ಪ್ರಕ್ರಿಯೆಗಳನ್ನು ಭಾರತ ಸಹಿಸುವುದಿಲ್ಲ ಎಂದಿದೆ.

Advertisement

ಇತ್ತೀಚಿನ ದಿನಗಳಲ್ಲಿ ಗಡಿ ಭಾಗದಲ್ಲಿ ಚೀನದ ಮೊಂಡಾಟ ಹೆಚ್ಚಾಗುತ್ತಲೇ ಇದೆ. ಇದನ್ನು ಶಾಶ್ವತವಾಗಿ ಬಂದ್‌ ಮಾಡಬೇಕಾದರೆ, ಅಂತಾ

ರಾಷ್ಟ್ರೀಯ ಮಟ್ಟದಲ್ಲಿ ಚೀನಕ್ಕೆ ಕಡಿವಾಣ ಹಾಕಲೇಬೇಕು. ಆ ದೇಶಕ್ಕೆ ಸೌರ್ವಭೌಮತ್ವ ಎಂಬುದು ಎಷ್ಟು ಮಹತ್ವವೋ ಮತ್ತೂಂದು ದೇಶದ ಸಾರ್ವಭೌಮತ್ವವೂ ಅಷ್ಟೇ ಮಹತ್ವದ್ದು ಎಂಬುದನ್ನು ಚೀನ ಅರಿಯುವಂತಾಗಬೇಕು. ಇದಕ್ಕೆ ತಡೆಹಾಕುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾನ ಮನಸ್ಕ ದೇಶಗಳು ಒಂದಾಗಿ ಚೀನ ಮೇಲೆ ವ್ಯಾಪಾರವೂ ಸೇರಿದಂತೆ ಬೇರೆ ಬೇರೆ ರೀತಿಯ ನಿರ್ಬಂಧ ಹೇರುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next