Advertisement

ಜೈಶ್‌ ಉಗ್ರ “ಕಪ್ಪುಪಟ್ಟಿ’ಗೆ: ಭಾರತದ ಯತ್ನಕ್ಕೆ ಮತ್ತೆ ಚೀನಾ ಅಡ್ಡಗಾಲು

08:14 PM Aug 11, 2022 | Team Udayavani |

ವಿಶ್ವಸಂಸ್ಥೆ: ಬರೀ ಬಾಯಿಮಾತಲ್ಲೇ “ಉಗ್ರರ ಮಟ್ಟಹಾಕುವ’ ಬಗ್ಗೆ ಜಾಗತಿಕ ವೇದಿಕೆಗಳಲ್ಲಿ ಘೋಷಿಸುವ ಪಾಕಿಸ್ತಾನ ಮತ್ತು ಚೀನಾದ ನಿಜಬಣ್ಣ ಮತ್ತೆ ಮತ್ತೆ ಬಯಲಾಗುತ್ತಲೇ ಇದೆ. ಅದಕ್ಕೆ ಮತ್ತೂಂದು ಸೇರ್ಪಡೆಯೆಂಬಂತೆ, ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನ ಸಹೋದರ ಅಬ್ದುಲ್‌ ರವೂಫ್ ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಅಮೆರಿಕ ಮತ್ತು ಭಾರತದ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಸ್ತಾಪಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿರುವುದು 2 ತಿಂಗಳಲ್ಲಿ ಇದು ಎರಡನೇ ಬಾರಿ.

Advertisement

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿನ ಪ್ರಸ್ತಾಪವನ್ನು ಬ್ಲಾಕ್‌ ಮಾಡಿದ ಚೀನಾದ ನಡೆ ಬಗ್ಗೆ ಪ್ರತಿಕ್ರಿಯಿಸಿದ ಭಾರತ, “ತನ್ನ ಪರಮಾಪ್ತ ಸ್ನೇಹಿತನ ಪರ ಚೀನಾ ನಿಂತಿರುವುದು ನಿರೀಕ್ಷಿತವಾದದ್ದೇ. ಜತೆಗೆ ಇದು ಪಾಕಿಸ್ತಾನದ ನೈಜ ಉದ್ದೇಶವನ್ನೂ ತೋರಿಸುತ್ತಿದೆ. ಉಗ್ರರ ವಿರುದ್ಧದ ಪಾಕ್‌ ಹೇಳಿಕೆಗಳೆಲ್ಲ ಬರೀ ಕಣ್ಣಿಗೆ ಮಣ್ಣೆರಚುವ ತಂತ್ರ ಮತ್ತು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿದೆ’ ಎಂದಿದೆ. ಜತೆಗೆ, ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯು (ಎಫ್ಎಟಿಎಫ್) ಇದನ್ನು ಗಮನಿಸಿ, “ಬೂದುಪಟ್ಟಿ’ಯಿಂದ ಪಾಕಿಸ್ತಾನವನ್ನು ಹೊರಹಾಕುವ ಮುನ್ನ ನೈಜ ಪರಿಸ್ಥಿತಿಯನ್ನು ಅರಿಯಬೇಕು’ ಎಂದೂ ಭಾರತ ಆಗ್ರಹಿಸಿದೆ.

ಜೂನ್‌ನಲ್ಲಿ ನಡೆದಿದ್ದ ಬೆಳವಣಿಗೆಯಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆ ಜಮಾತ್‌-ಉದ್‌-ದಾವಾ ಸಂಘಟನೆಯ ಎರಡನೇ ಅತ್ಯುನ್ನತ ನಾಯಕ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಕಪ್ಪುಪಟ್ಟಿಗೆ ಸೇರಿಸಲೂ ಚೀನಾ ತಡೆಯೊಡ್ಡಿತ್ತು. ಆ ಸಂದರ್ಭದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶ ಬೇಕು ಎಂಬ ವಾದವನ್ನೂ ಮುಂದಿಟ್ಟಿತ್ತು ಚೀನಾ ಸರ್ಕಾರ.

ಯಾರೀ ರವೂಫ್? :

ಉಗ್ರ ಅಬ್ದುಲ್‌ ರವೂಫ್ ಜೈಶ್‌ ಉಗ್ರ ಸಂಘಟನೆಯ ಕಾರ್ಯನಿರ್ವಹಣಾ ಮುಖ್ಯಸ್ಥನಾಗಿದ್ದು, ಕಾಶ್ಮೀರದಲ್ಲಿ ಸಂಘಟನೆಯ ಎಲ್ಲ ಚಟುವಟಿಕೆಗಳನ್ನೂ ಈತನೇ ನಿರ್ವಹಿಸುತ್ತಿದ್ದಾನೆ. ಈತ ಜೆಇಎಂ ಸ್ಥಾಪಕ ಹಾಗೂ ಕಂದಹಾರ್‌ ಹೈಜಾಕರ್‌ ಮಸೂದ್‌ ಅಜರ್‌ನ ಕಿರಿಯ ಸಹೋದರ. ಹೀಗಾಗಿ, ರವೂಫ್ನನ್ನು ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರಿಸಿ, ಆತನಿಗೆ ಜಾಗತಿಕ ಪ್ರಯಾಣ ನಿರ್ಬಂಧ ವಿಧಿಸುವುದು ಮತ್ತು ಆತನ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವುದು ಭಾರತ ಮತ್ತು ಅಮೆರಿಕದ ಪ್ರಯತ್ನವಾಗಿತ್ತು. ಆದರೆ, ಇದಕ್ಕೆ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ಎಲ್ಲ 15 ಸದಸ್ಯ ರಾಷ್ಟ್ರಗಳು ಒಪ್ಪಿಗೆ ಬೇಕಿತ್ತು.

Advertisement

ಚೀನಾ ಕ್ಯಾತೆ:

ಆದರೆ ಈ ಪ್ರಸ್ತಾಪಕ್ಕೆ ಅಡ್ಡಗಾಲು ಹಾಕಿದ ಚೀನಾ, “ಈ ಪ್ರಕರಣವನ್ನು ಅಧ್ಯಯನ ನಡೆಸಲು ನಮಗೆ ಸಾಕಷ್ಟು ಕಾಲಾವಕಾಶ ಬೇಕು. ಸಮಿತಿಯ ಮಾರ್ಗಸೂಚಿಯ ಅನ್ವಯ ನಾವು ಈ ಪ್ರಸ್ತಾಪಕ್ಕೆ ತಡೆ ತಂದಿದ್ದೇವೆ’ ಎಂದು ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next