ಭದ್ರತಾ ಸಮಿತಿ ಸಭೆ ಬಗ್ಗೆ ಯಾವುದೇ ಪತ್ರಿಕಾ ಪ್ರಕಟನೆಗಳಿಲ್ಲ
ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸ್ಥಾನಮಾನ ವಿಚಾರವನ್ನೇ ದೊಡ್ಡದು ಮಾಡಿ, ವಿಶ್ವಸಂಸ್ಥೆಗೆ ದೂರು ನೀಡಿ, ಅಂತಾರಾಷ್ಟ್ರೀಯ ವಿಷಯವನ್ನಾಗಿಸಲು ಹೊರಟಿದ್ದ ಪಾಕಿಸ್ಥಾನ ಮತ್ತು ಅದರ ಪರಮಾಪ್ತ ರಾಷ್ಟ್ರ ಚೀನದ ಪ್ರಯತ್ನ ಠುಸ್ ಆಯಿತೇ? ಎಂಬ ಚರ್ಚೆ ಈಗ ನಡೆಯುತ್ತಿದೆ.
ಪಾಕಿಸ್ಥಾನದ ಆಗ್ರಹದ ಮೇರೆಗೆ ಚೀನ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದು, ಅದರಂತೆ ಗುಪ್ತ ಸಭೆ ಆಯೋಜಿಸಲಾಗಿತ್ತು. ಆದರೆ 15 ಸದಸ್ಯ ರಾಷ್ಟ್ರಗಳ ಈ ಸಭೆಯಲ್ಲಿ ಏನು ನಿರ್ಣಯ ಕೈಗೊಳ್ಳಲಾಯಿತು? ಸಭೆಯ ಫಲಿತಾಂಶವೇನು ಎಂಬ ಬಗ್ಗೆ ವಿಶ್ವಸಂಸ್ಥೆ ಯಾವುದೇ ಪ್ರತಿಕ್ರಿಯೆ, ಪ್ರಕಟನೆಯನ್ನು ನೀಡದೇ ಇರುವುದು ಈ ಎರಡು ರಾಷ್ಟ್ರಗಳ ಪ್ರಲಾಪ ವ್ಯರ್ಥವಾದಂತಾಗಿದೆ ಎನ್ನಲಾಗಿದೆ. ಕಾರಣ ಶುಕ್ರವಾರದ ಸಭೆ ಬಳಿಕ ಚೀನದ ವಿಶ್ವಸಂಸ್ಥೆ ರಾಯಭಾರಿ ಝಾಂಗ್ ಜುನ್ ಮತ್ತು ಪಾಕಿಸ್ಥಾನದ ರಾಯಭಾರಿ ಮಲೀಹಾ ಲೋಧಿ ಅವರು ಪತ್ರಕರ್ತರ ಯಾವುದೇ ಪ್ರಶ್ನೆಗೆ ಉತ್ತರಿಸದೆ ಹೊರನಡೆದಿದ್ದಾರೆ.
ಇದೇ ವೇಳೆ ಮೂಲಗಳ ಪ್ರಕಾರ, ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡುವಂತೆ ಚೀನ ಆಗಸ್ಟ್ ತಿಂಗಳ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ದೇಶವಾದ ಪೋಲಂಡ್ ಮೇಲೆ ಒತ್ತಡ ಹೇರುತ್ತಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಬ್ರಿಟನ್ ಕೂಡ ಈ ವಿಚಾರದಲ್ಲಿ ಚೀನ ಬೆಂಬಲಕ್ಕೆ ನಿಂತಿದೆ ಎನ್ನಲಾಗಿದೆ. ಆದರೂ ಚೀನ ಮತ್ತು ಪಾಕಿಸ್ಥಾನವು ತಮ್ಮ ಮೂಗಿನ ನೇರಕ್ಕೆ ಹೇಳಿಕೆಗಳನ್ನು ನೀಡಿವೆ ಎನ್ನಲಾಗಿದೆ. ಈ ಕುರಿತಂತೆ ಭದ್ರತಾ ಸಮಿತಿಯ ಅಧ್ಯಕ್ಷರೂ ಮೂಲಗಳಿಗೆ ಪ್ರತಿಕ್ರಿಯಿಸಿ ಕಾಶ್ಮೀರ ಬಗ್ಗೆ ಪಾಕ್ ಎತ್ತಿದ ವಿಚಾರದಲ್ಲಿ ಏನೂ ಸತ್ವ ಇರಲಿಲ್ಲ. ಈ ಬಾರಿಯೂ ಯಾವುದೇ ಫಲಿತಾಂಶ ಬಂದಿಲ್ಲ ಎಂದಿದ್ದಾರೆ.
ಇದರೊಂದಿಗೆ ಪತ್ರಕರ್ತರ ಜತೆ ಮಾತನಾಡಿದ್ದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸೈಯದ್ ಅಕºರುದ್ದೀನ್ ಅವರೂ, ಅಂತಾರಾಷ್ಟ್ರೀಯ ಸಮುದಾಯ ಕಾಶ್ಮೀರ ವಿಚಾರದಲ್ಲಿ ಏನು ಹೇಳಿದೆ? ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಎಸೆದಿದ್ದರು. ಅಲ್ಲದೇ, ನಾವು ಶಿಮ್ಲಾ ಒಪ್ಪಂದದಂತೆ ಕೈ ಕುಲುಕಲು ತಯಾರಾಗಿದ್ದೇವೆ. ಆದರೆ ಪಾಕ್ ಭಯೋತ್ಪಾದನೆ ನಿಲ್ಲಿಸಿದ ಬಳಿಕವಷ್ಟೇ ನಮ್ಮ ಮಾತುಕತೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.