ವಾಷಿಂಗ್ಟನ್: ತಮ್ಮ ಮನರಂಜನೆಗಾಗಿ ಡಾಲ್ಫಿನ್‌ಗಳ ಆಟಗಳನ್ನು ನೋಡುವುದು ಅಮೆರಿಕನ್ನರ ಮೆಚ್ಚಿನ ಹವ್ಯಾಸ. ಹಾಗಾಗಿ, ಅಲ್ಲಿನ ನಾನಾ ನಗರಗಳಲ್ಲಿ ಡಾಲ್ಫಿನ್‌ಗಳ ಆಟಗಳ ಮನರಂಜನೆಯನ್ನು ಉಣಬಡಿಸಲೆಂದೇ ದೊಡ್ಡ ಈಜುಕೊಳಗಳುಳ್ಳ ಸೀಕ್ವೇರಿಯಂಗಳಿವೆ. ಅದರಲ್ಲಿ ತರಬೇತುದಾರರು ಡಾಲ್ಫಿನ್‌ಗಳಿಂದ ವಿವಿಧ ರೀತಿಯ ಸರ್ಕಸ್‌ಗಳನ್ನು, ಆಟಗಳನ್ನು ಆಡಿಸಿ ಜನರನ್ನು ಖುಷಿಪಡಿಸುತ್ತಾರೆ. ಆದರೆ, ಮಿಯಾಮಿ ನಗರದಲ್ಲಿರುವ ಸೀಕ್ವೇರಿಯಂನಲ್ಲಿ ದುರ್ಘಟನೆಯೊಂದು ನಡೆದಿದೆ.
ಅಲ್ಲಿ ಡಾಲ್ಫಿನ್‌ಗಳನ್ನು ಆಡಿಸುತ್ತಿದ್ದ ಸಂಡನ್ಸ್ ಎಂಬ ತರಬೇತುದಾರರೊಬ್ಬರ ಮೇಲೆ ಡಾಲ್ಫಿನ್ ಮೀನು ದಾಳಿ ಮಾರಣಾಂತಿಕ ದಾಳಿ ನಡೆಸಿದ್ದು ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ತರಬೇತುದಾರನ ಆಣತಿಯಂತೆ ವಿವಿಧ ಚಾಕಚಕ್ಯತೆಗಳನ್ನು ಪ್ರದರ್ಶಿಸುತ್ತಿದ್ದ ಡಾಲ್ಫಿನ್, ಇದ್ದಕ್ಕಿದ್ದಂತೆ ಆಕ್ರೋಶಗೊಂಡು, ಏಕಾಏಕಿ ತರಬೇತಿದಾರನ ಮೇಲೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಡಾಲ್ಫಿನ್‌ಗಳ ಆಟವನ್ನು ಸೆರೆಹಿಡಿಯುತ್ತಿದ್ದ ಪ್ರೇಕ್ಷಕರ ಮೊಬೈಲ್‌ಗಳಲ್ಲಿ ಎದೆ ಝಲ್ಲೆನಿಸುವ ದಾಳಿಯ ದೃಶ್ಯಗಳೂ ಚಿತ್ರೀಕರಣಗೊಂಡಿವೆ.
ಇದೇ ಮೊದಲೇನಲ್ಲ! :
ಇತ್ತೀಚಿನ ವರ್ಷಗಳಲ್ಲಿ, ಡಾಲ್ಫಿನ್‌ಗಳು ರೊಚ್ಚಿಗೆದ್ದು ತರಬೇತುದಾರರನ್ನಷ್ಟೇ ಅಲ್ಲ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರ ಮೇಲೂ ದಾಳಿ ನಡೆಸಿರುವ ಹಲವಾರು ಉದಾಹರಣೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೀಕ್ವೇರಿಯಂಗಳ ಲೈಸನ್ಸ್ ಪಡೆದವರು ಡಾಲ್ಫಿನ್‌ಗಳನ್ನು ಸರಿಯಾದ ಕ್ರಮದಲ್ಲಿ ಉಪಚರಿಸುವುದಿಲ್ಲ. ಅವುಗಳಿಗೆ ಕೊಳೆತ ಮೀನುಗಳನ್ನು ನೀಡುವುದು, ಅವುಗಳ ಆರೋಗ್ಯ ಸರಿಯಿಲ್ಲದಿದ್ದರೂ ಅವುಗಳನ್ನು ಪ್ರದರ್ಶನಕ್ಕೆ ತರುವುದು ಇತ್ಯಾದಿಗಳಿಂದಾಗಿ ಅವು ರೊಚ್ಚಿಗೇಳುತ್ತವೆ. ಇಂಥ ಪ್ರಮಾದಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಅಮೆರಿಕ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಿದ್ದಾರೆ.