Advertisement

ಚಿಲಿ: ಸೋಂಕು ಮುಕ್ತ ಪ್ರಮಾಣ ಪತ್ರ ವಿವಾದ

04:59 PM Apr 28, 2020 | sudhir |

ಮಣಿಪಾಲ: ಕೆಲ ವಾರಗಳಿಂದ ಕೋವಿಡ್‌-19 ವಿರುದ್ಧ ಸೆಣಸಾಡಿ ಚೇತರಿಸಿಕೊಂಡ ಕೆಲ ದೇಶಗಳು ಸಹಜ ಸ್ಥಿತಿಯತ್ತ ಮರುಳುತ್ತಿವೆ. ಅಲ್ಲದೇ ನಿಧಾನವಾಗಿ ಒಂದೊಂದೇ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ದೈನಂದಿನ ಚಟುವಟಿಕೆಗಳಿಗೆ ತೆರೆದುಕೊಳ್ಳುತ್ತಿದೆ. ಇದೀಗ ದಕ್ಷಿಣ ಅಮೆರಿಕಾ ಭಾಗದಲ್ಲಿರುವ ಚಿಲಿ ಸರಕಾರವೂ ನಿಯಮಗಳ ಸಡಿಲಿಕೆಯತ್ತ ಮುಖ ಮಾಡಿದೆ.
ಜತೆಗೆ ಸೋಂಕು ಮುಕ್ತ ಎಂಬ ಪ್ರಮಾಣ ಪತ್ರವನ್ನೂ ನೀಡಲು ಆರಂಭಿಸಿದೆ. ಕೋವಿಡ್‌-19 ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡ ಜನರಿಗೆ ಈ ಪ್ರಮಾಣ ಪತ್ರವನ್ನು ನೀಡಲಿದ್ದು, ಅವರು ಹಿಂದಿನಂತೆ ಕೆಲಸಕ್ಕೆ ಮರಳಲು ಅವಕಾಶ ಮಾಡುವುದಾಗಿ ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ.

Advertisement

ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ಜನರು ಮತ್ತೆ ಸೋಂಕಿಗೆ ತುತ್ತಾಗುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಸೋಂಕು ಮುಕ್ತ ಎಂದು ಪ್ರಮಾಣ ಪತ್ರ ಕೊಡುವುದು ಅಸಮಂಜಸ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್‌ಒ) ಅಭಿಪ್ರಾಯ ಪಟ್ಟಿತ್ತು. ಜತೆಗೆ ಎಲ್ಲ ದೇಶಗಳಿಗೂ ಅಂಥದೊಂದು ಪದ್ಧತಿಯನ್ನು ಅನುಸರಿಸಬೇಡಿ ಎಂದು ಸಲಹೆ ನೀಡಿತ್ತು.ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸದ ಚಿಲಿ ಸರಕಾರ, ಪ್ರಮಾಣ ಪತ್ರ ನೀಡುತ್ತಿರುವುದು ಟೀಕೆಗೆ ಗುರಿಯಾಗಿದೆ. ಸೋಂಕು ಮುಕ್ತ ಪ್ರಮಾಣ ಪತ್ರಗಳನ್ನು ನೀಡುವುದರಿಂದ ಮತ್ತಷ್ಟು ದುಷ್ಪರಿಣಾಮಗಳು ಎದುರಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಅಪಾಯಕ್ಕೆ ತಳ್ಳುತ್ತಿದೆ ಎಂಬ ವಾದ ಕೇಳಿ ಬಂದಿದೆ.

ಆದರೆ ಈ ಟೀಕೆಯನ್ನು ತಳ್ಳಿಹಾಕಿರುವ ಸರಕಾರವು, “ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಎಂಬುದು ನಮಗೆ ತಿಳಿದಿದೆ. ಜನರಲ್ಲಿ ಕೋವಿಡ್‌ -19 ಅನ್ನು ಮಣಿಸುವ ಶಕ್ತಿ ಇದೆಯೇ ಎಂಬುದನ್ನು ಪ್ರಮಾಣಪತ್ರ ಖಚಿತಪಡಿಸುವುದಿಲ್ಲ.

ಬದಲಾಗಿ ಅವರು ರೋಗದಿಂದ ಚೇತರಿಸಿಕೊಂಡಿದ್ದು, ಕ್ವಾರಂಟೇನ್‌ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎಂಬುದನ್ನು ಮಾತ್ರ ಖಚಿತಪಡಿಸಲಿದೆ ಎಂದು ತಿಳಿಸಿದ್ದಾರೆ.

ಚಿಲಿಯಲ್ಲಿ ಇದುವರೆಗೆ 13 000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 189 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 7 ಸಾವಿರದಷ್ಟು ಮಂದಿ ಗುಣಮುಖರಾಗಿದ್ದಾರೆ. ಮಾರ್ಚ್‌ 20 ರ ಬಳಿಕ ಸೋಂಕು ಪ್ರಕರಣ ಪತ್ತೆಯಾಗುವ ಸಂಖ್ಯೆ ಹೆಚ್ಚುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next