Advertisement
ರಾಜ್ಯದಲ್ಲಿ 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರೆ ತಗ್ಗಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರ್ಕಾರ ದಿನಾಂಕ 3.5.19ರಂದು ತನ್ನ ಆದೇಶದಲ್ಲಿ 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೊರ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ.
Related Articles
Advertisement
ವಿದ್ಯಾರ್ಥಿಯು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುವ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕಲಿಕಾ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ತರಗತಿಯೊಳಗೆ ಶೇಖರಿಸಲು ಅನುಕೂಲ ಮಾಡಿಕೊಂಡಬೇಕು ಎಂದು ಸೂಚಿಸಿರುವ ಸರ್ಕಾರ, ಎಲ್ಲಾ ಶಾಲೆಗಳಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳುವುದರಿಂದ ಮಕ್ಕಳು ಮನೆಯಿಂದ ನೀರು ತರುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟಿದೆ. ನೋಟ್ ಪುಸ್ತಕಗಳ ಹಾಳೆಗಳ ಬಗ್ಗೆಯೂ ಸರ್ಕಾರ ನಿಗಾವಹಿಸಿದ್ದು, 100 ಹಾಳೆಗಳು ಮೀರಬಾರದು. ಅಲ್ಲದೆ, ತಿಂಗಳ 3ನೇ ಶನಿವಾರವನ್ನು ‘ಬ್ಯಾಗ್ ರಹಿತ ದಿನ’ವನ್ನಾಗಿ ಆಚರಿಸುವಂತೆಯೂ ಸಲಹೆ ನೀಡಿದೆ.
ಮೂಳೆ ತಜ್ಞರ ಅಭಿಪ್ರಾಯ ಪಡೆದಿದೆ: ಶಾಲಾ ಬ್ಯಾಗ್‌ನ ಹೊರೆ ತಗ್ಗಿಸುವ ಕುರಿತು ಡಿಸಿಆರ್‌ಟಿಯು ಸೆಂಟರ್ ಫಾರ್ ಚೈಲ್ಡ್ ಆಂಡ್ ಲಾ, ಎನ್‌ಎಲ್ಎಸ್‌ಯುಎಲ್, ಬೆಂಗಳೂ ಇವರ ಸಹೋಗದಲ್ಲಿ 2016-17ನೇ ಸಾಲಿನಲ್ಲಿ ಕೈಗೊಂಡ ಅಧ್ಯಯನದಲ್ಲಿ ತಜ್ಞರ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಪ್ರಶ್ನಾವಳಿಗಳ ಮೂಲಕ ಉತ್ತರಗಳ ಅಧ್ಯಯನ ನಡೆಸಿ ಮಾರ್ಗದರ್ಶಿ ನಿಯಮಗಳನ್ನು ರೂಪಿಸಲಾಗಿದೆ ಎಂದು ಸರ್ಕಾರ ತನ್ನ ಆದೇಶವನ್ನು ಸಮರ್ಥಿಸಿಕೊಂಡಿದೆ. ಮಕ್ಕಳ ದೇಹದ ತೂಕದ ಶೇ.10ರಿಂದ 15ರಷ್ಟು ತೂಕದ ಪಠ್ಯ ಪುಸ್ತಕಗಳನ್ನು ತೆಗೆದುಕೊಂಡ ಹೋಗಬಹುದು ಎಂದು ಮೂಳೆ ತಜ್ಞರ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
● ಬಿ.ವಿ.ಸೂರ್ಯ ಪ್ರಕಾಶ್