Advertisement

ಮಕ್ಕಳ ಮೊಬೈಲ್‌ ಚಟ: ಸದನದಲ್ಲಿ ಪ್ರಸ್ತಾಪ

09:20 PM Feb 22, 2023 | Team Udayavani |

ವಿಧಾನಪರಿಷತ್ತು: “ಮಕ್ಕಳಲ್ಲಿನ ಮೊಬೈಲ್‌ ಗೀಳು’ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

Advertisement

ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರು ಶೂನ್ಯ ವೇಳೆಯಲ್ಲಿ “ಮಕ್ಕಳಿಗೆ ಮೊಬೈಲ್‌ ಚಟ’ ಎಂಬ ಶೀರ್ಷಿಕೆಯಡಿ ಫೆ.20ರಂದು “ಉದಯವಾಣಿ’ ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, ಮಕ್ಕಳು ಮೊಬೈಲ್‌ ಬಳಸುವುದನ್ನು ನಿಯಂತ್ರಿಸುವುದು ಸವಾಲಿನ ಕೆಲಸ. ಯು.ಬಿ. ವೆಂಕಟೇಶ್‌ ಅವರು ಅತ್ಯಂತ ಪ್ರಸ್ತುತವಾದ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಇದು ಸಮಾಜದ ದೊಡ್ಡ ಸವಾಲಾಗಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಮಧ್ಯೆ, ಶಾಲೆಗಳಲ್ಲಿ ನೈತಿಕ ಶಿಕ್ಷಣ ಆರಂಭಿಸಬೇಕು ಎಂಬ ವಿಚಾರ ಅನೇಕ ವರ್ಷಗಳಿಂದ ಚರ್ಚೆಯಲ್ಲಿದೆ. ಈ ಸದನದಲ್ಲಿ ಹಲವು ಬಾರಿ ಈ ವಿಷಯ ಪ್ರಸ್ತಾಪವಾಗಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ಯು.ಬಿ. ವೆಂಕಟೇಶ್‌ ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಸಹ ಧ್ವನಿಗೂಡಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಅವಕಾಶವಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಯು.ಬಿ. ವೆಂಕಟೇಶ್‌, “ಮಕ್ಕಳ ಮೊಬೈಲ್‌ ಚಟ-ಚಿಣ್ಣರಿಗೆ ಸ್ಮಾರ್ಟ್‌ ಫೋನ್‌ ಗೀಳು, ಭವಿಷ್ಯವೇ ಹಾಳು. ವಿವಿಧ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಈ ಚಟ’ ಎಂದು ಉದಯವಾಣಿ ಪತ್ರಿಕೆಯ ಮುಖಪುಟದಲ್ಲಿ ವರದಿಯಾಗಿದೆ. ಆದ್ದರಿಂದ, ಮಕ್ಕಳಲ್ಲಿ ವಿವಿಧ ರೀತಿಯ ಖಾಯಿಲೆಗಳು ಮತ್ತು ಸಮಾಜದಲ್ಲಿ ಆತಂಕಕಾರಿ ಕೃತ್ಯಗಳ ಮನೋಭಾವನೆಯನ್ನು ಹೋಗಲಾಡಿಸುವ ಸಲುವಾಗಿ ಶಿಕ್ಷಣ ಇಲಾಖೆ ತಕ್ಷಣ ಎಚ್ಚೆತ್ತು ಪ್ರತಿಯೊಂದು ಶಾಲೆಗಳಲ್ಲಿ ಮಕ್ಕಳ ಮತ್ತು ಪೋಷಕರ ಜಂಟಿ ಸಭೆಯನ್ನು ಶಿಕ್ಷಕರೊಂದಿಗೆ ನಡೆಸಿ ಮಕ್ಕಳಲ್ಲಿ ಅರಿವು ಉಂಟು ಮಾಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಒತ್ತಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next