Advertisement

ಹಿರಿಯರಿಗಿಂತ ಮಕ್ಕಳ ಸಾಹಿತ್ಯ ಶ್ರೇಷ್ಠ: ಹಲಗತ್ತಿ

07:42 AM Feb 02, 2019 | Team Udayavani |

ಬೀದರ: ಮಕ್ಕಳ ಸಾಹಿತ್ಯ ಹಿರಿಯರ ಸಾಹಿತ್ಯಕ್ಕಿಂತ ಶ್ರೇಷ್ಠವಾಗಿದ್ದು, ಈ ಸಾಹಿತ್ಯದಲ್ಲಿ ಲಿಂಗ ತಾರತಮ್ಯ ಇರದಂತೆ ಎಚ್ಚರಿಕೆ ವಹಿಸಬೇಕು ಎಂದು ಚಿಣ್ಣರ ಚಿಲುಮೆ ಮಕ್ಕಳ ರಂಗಭೂಮಿ ಯೋಜನೆಯ ರಾಜ್ಯ ಸಮನ್ವಯ ಸಂಚಾಲಕ ಶಂಕರ ಹಲಗತ್ತಿ ಹೇಳಿದರು.

Advertisement

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಚಿಣ್ಣರ ಚಿಲುಮೆ-ಮಕ್ಕಳ ನಾಟಕ ಯೋಜನೆಯಡಿ ಕಲಬುರಗಿ ವಿಭಾಗ ಮಟ್ಟದ ನಾಟಕೋತ್ಸವ ನಿಮಿತ್ತ ಮಕ್ಕಳ ರಂಗಭೂಮಿ ಇಂದು-ನಾಳೆ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿಗಳು ಬರೆದ ಹಿರಿಯರ ಸಾಹಿತ್ಯವು ವಿಮರ್ಶೆಗೆ ಒಳಪಡುತ್ತದೆ. ಆದರೆ ಮಕ್ಕಳ ಸಾಹಿತ್ಯದ ಬಗ್ಗೆ ಎಲ್ಲಿಯೂ ವಿಮರ್ಶೆ ಆಗದೇ ಇರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಬ್ಬರು ನಮ್ಮ ಜೀವನವನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿಕೊಂಡಿದ್ದೇವೆ. ಇಂತಹ ಮನೋಭಾವ ತೊರೆದು ಪರೋಪಕಾರ ಭಾವ ಬೆಳೆಸಿಕೊಳ್ಳಬೇಕು. ಇಂದಿಗೂ ಕೆಲವು ಗ್ರಾಮಗಳಲ್ಲಿ ಮಕ್ಕಳು ಶಾಲೆಗೆ ಹೋಗದೇ ಇರುವುದನ್ನು ಕಾಣುತ್ತೇವೆ. ಪ್ರತಿಯೊಬ್ಬರು ಒಂದೊಂದು ಮಗುವನ್ನು ದತ್ತು ಪಡೆದು ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು,

ರಂಗ ನಿರ್ದೇಶಕ ಡಿಂಗ್ರಿ ನರೇಶ ಮಾತನಾಡಿ, ರಂಗಭೂಮಿಯೊಂದು ವಿಜ್ಞಾನವಾಗಿದೆ. ರಂಗಭೂಮಿ, ಕಲೆ ಮತ್ತು ಸಂಸ್ಕೃತಿಗಳು ಇಲ್ಲವಾದಲ್ಲಿ ಬದುಕು ರಣರಂಗವಾಗಲಿದೆ ಎಂದು ಹೇಳಿದರು.

Advertisement

ಕಲಬುರಗಿ ವಿಭಾಗ ಮಟ್ಟದ ಚಿಣ್ಣರ ಚಿಲುಮೆ ಯೋಜನೆಯ ಸಂಚಾಲಕ ಪ್ರೊ| ಪ್ರಭಾಕರ ಸಾತಖೇಡ ವಿಶೇಷ ಉಪನ್ಯಾಸ ನೀಡಿದರು. ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಆರ್‌.ವಿ. ಬಕಚೇಡಿ ಮಾತನಾಡಿದರು. ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್‌, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಮೇಶ ಬಿರಾದಾರ, ರಂಗಭೂಮಿ ಕಲಾವಿದ ಯೇಸುದಾಸ ಅಲಿಯಂಬೂರೆ, ಮಹೇಶ ಗೋರನಾಳಕರ್‌, ರಾಘವೇಂದ್ರ ಹಳೆಪೇಟೆ, ಚಂದ್ರಮೋಹನ, ಉಪನ್ಯಾಸಕರಾದ ವಿದ್ಯಾ ಪಾಟೀಲ, ಶ್ರೀನಿವಾಸ ರೆಡ್ಡಿ, ಭೀಮಾಶಂಕರ ಕೆ.ಬಿ., ಮನೋಹರ ಮೇತ್ರೆ, ಪಾರ್ವತಿ ಮೇತ್ರೆ, ಸುಂದರ್‌ರಾಜ್‌, ಮನೋಜಕುಮಾರ, ಚಿದಾನಂದ ರುಮ್ಮಾ, ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಂಬರೀಶ ಮಲ್ಲೇಶಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ಉಪನ್ಯಾಸಕ ಮನೋಹರ ಮೇತ್ರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next