Advertisement

ಮಕ್ಕಳ ಸಾಹಿತ್ಯ ಬಗ್ಗೆ ಉದಾಸೀನತೆ ಬೇಡ

04:15 PM Nov 25, 2018 | |

ಮುಧೋಳ: ಮಕ್ಕಳ ಸಾಹಿತ್ಯದ ಬಗ್ಗೆ ಕೀಳರಿಮೆ, ಉದಾಸೀನತೆ ನಮ್ಮಲ್ಲಿದೆ. ಮಕ್ಕಳ ಸಾಹಿತ್ಯ ರಚಿಸುವುದು ಬಹಳ ಕ್ಲಿಷ್ಟಕರವಾದದ್ದು. ಮಕ್ಕಳ ಸಾಹಿತ್ಯದ ಪರಿಚಯ, ಭಾಷಾಭಿಮಾನ, ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡು ಹೋಗಲು ಪೂರಕವಾಗುತ್ತವೆ ಎಂದು ಹುನಗುಂದದ ಕುಮಾರಿ ಪೂಜಾ ಸುರೇಶ ಹುದ್ದಾರ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ವತಿಯಿಂದ ಶನಿವಾರ ಸ್ಥಳೀಯ ಸಾಯಿನಿಕೇತನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಎಲ್ಲ ಮಕ್ಕಳನ್ನು ಸಾಹಿತ್ಯಿಕವಾಗಿ ಒಗ್ಗೂಡಿಸುವ ವೇದಿಕೆಯಾಗಿದ್ದು ಇದು ಸಮ್ಮೇಳನವಲ್ಲ, ಸಮ್ಮಿಲನವಾಗಿದೆ. ಮಕ್ಕಳಿಂದ ಮಕ್ಕಳಿಗಾಗಿ ರಚಿಸಲ್ಪಡುವ ಸಾಹಿತ್ಯ ಆಗಬೇಕಾಗಿತ್ತು. ಆದರೆ ಇಂದು ಹಿರಿಯರು ತಮ್ಮ ಬಾಲ್ಯದ ಅನುಭವಗಳ ಆಧಾರದ ಮೇಲೆ ರಚಿಸಿರುವುದಕ್ಕೆ ಮಕ್ಕಳ ಸಾಹಿತ್ಯ ಎನ್ನುತ್ತಾರೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಅಣ್ಣಾಜಿ ಫಡತಾರೆ ಮಾತನಾಡಿ, ಮಕ್ಕಳ ಸಾಹಿತ್ಯ ಎಂದರೆ ಹಿರಿಯ ಅನುಭವಿಕ ಸಾಹಿತಿಗಳು ಹಾಗೂ ಅವರ ಸಾಹಿತ್ಯ ರಚನೆಗಳ ಪ್ರೇರಣೆ, ಪ್ರೋತ್ಸಾಹ ಮಾರ್ಗದರ್ಶನಗಳಿಂದ 10ರಿಂದ 15 ವರ್ಷಗಳ ಮಕ್ಕಳಿಗಾಗಿ ರಚಿಸಿದ ಸಾಹಿತ್ಯ. ನಾನು ನಿವೃತ್ತಿ ಅಂಚಿನಲ್ಲಿ ಮಕ್ಕಳ ಸಾಹಿತ್ಯ ಲೋಕದಲ್ಲಿ ಪಾದಾರ್ಪಣೆ ಮಾಡಿದೆ. ನನ್ನ ಬರವಣಿಗೆಗೆ ಪ್ರಥಮ ಪ್ರೇರಣೆ ನೀಡಿದವರು ಧಾರವಾಡದ ಮಕ್ಕಳ ಮಂದಿರದ ಮಕ್ಕಳ ಮಾಸಪತ್ರಿಕೆಯ ಸಂಪಾದಕ ಈಶ್ವರ ಕಮ್ಮಾರ ಅವರು. ಪ್ರಸಿದ್ಧ ಮಕ್ಕಳ ಸಾಹಿತಿಗಳ ಸಮಗ್ರ ಮಕ್ಕಳ ಕಥೆ, ಕವನ ಸಂಕಲನಗಳನ್ನು ಕೊಂಡು ಗಮನವಿಟ್ಟು ಓದಿ,ನಿಮ್ಮ ವಿಚಾರಗಳನ್ನು ಅವರ ದಾಟಿಯಲ್ಲಿ ಬರೆಯಿರಿ ಎಂದು ಸೂಕ್ತ ಸಲಹೆ ನೀಡಿದರು.

ವಿರಕ್ತಮಠ-ಗವಿಮಠದ ನಿಜಗುಣದೇವರು ಸಾನ್ನಿಧ್ಯ, ಕಸಾಪ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಕೆ. ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಸಾಹಿತಿ ಫ.ಗು. ಸಿದ್ದಾಪುರ, ರಾಜೇಶ ವಾಲಿ ಇದ್ದರು. ಕಸಾಪ ಅಧ್ಯಕ್ಷ ಸಂಗಮೇಶ ನೀಲಗುಂದ ಸ್ವಾಗತಿಸಿದರು. ಸಿ.ಎಲ್‌. ರೂಗಿ ನಿರೂಪಿಸಿದರು. ಸಮ್ಮೇಳನದ ಉದ್ಘಾಟನಾ ಸಮಾರಂಭದ ಮೊದಲು ಸಮ್ಮೇಳನದ ಸರ್ವಾಧ್ಯಕ್ಷ ಅಣ್ಣಾಜಿ ಫಡತಾರೆ ಅವರ ನೇತೃತ್ವದಲ್ಲಿ ಕಸಾಪ ಭವನದಿಂದ ವೇದಿಕೆ ವಿವಿಧ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next