Advertisement
ಸಂಟ್ಯಾರ್ ಉನ್ನತ ಹಿ.ಪ್ರಾ. ಶಾಲಾ ನಾಯಕಿ ಅನನ್ಯಾ ಅಧ್ಯಕ್ಷತೆಯಲ್ಲಿ ಶನಿವಾರ ಸಂಟ್ಯಾರ್ ಶಾಲಾ ಸಭಾಂಗಣದಲ್ಲಿ ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಮಕ್ಕಳ ವಿಶೇಷ ಗ್ರಾಮಸಭೆ ನಡೆಯಿತು.
Related Articles
Advertisement
ಎಚ್ಚರಿಕೆ ಕ್ರಮ ಅಗತ್ಯಸಂಟ್ಯಾರ್ ಶಾಲಾ ವಿದ್ಯಾರ್ಥಿ ರಮ್ಯಾ ಮಾತನಾಡಿ, ಶಾಲಾ ಬಳಿ ಹೆಚ್ಚು ಅಪಘಾತ ಸಂಭವಿಸುತ್ತಿದೆ. ಇಲ್ಲಿ ಬ್ಯಾರಿಕೇಡ್,
ಹಂಪ್ಸ್, ಜೀಬ್ರಾ ಕ್ರಾಸ್ ಹಾಕಬೇಕು ಎಂದು ಒತ್ತಾಯಿಸಿದರು. ಉತ್ತರಿಸಿದ ಗ್ರಾ.ಪಂ. ಉಪಾಧ್ಯಕ್ಷ ವಸಂತ್, ದಾನಿಗಳ ಸಹಾಯದಿಂದ ಬ್ಯಾರಿಕೇಡ್ ಹಾಕುವ ಪ್ರಸ್ತಾವನೆ ಇತ್ತು. ಆದರೆ ಇದನ್ನು ಜತನದಿಂದ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರಿಗೂ ಇದೆ ಎಂದರು. ಮಧ್ಯಪ್ರವೇಶಿಸಿದ ರಮ್ಯಾ, ಹಿಂದಿನ ಬಾರಿಯೂ ಇದೇ ರೀತಿ ಆಶ್ವಾಸನೆ ನೀಡಿದ್ದೀರಿ. ಆದರೆ ಇದುವರೆಗೆ ಬೇಡಿಕೆ ಈಡೇರಿಲ್ಲ ಎಂದು ಗಮನ ಸೆಳೆದರು. ಪ್ರತಿಕ್ರಿಯಿಸಿದ ವಸಂತ್, ಸೂಕ್ತ ದಾನಿಗಳುಸಿಗದ ಕಾರಣ ಬೇಡಿಕೆ ಈಡೇರಿಲ್ಲ. ಶಾಲಾ ವೇಳೆಯಲ್ಲಿ ಮಾತ್ರ ಬ್ಯಾರಿಕೇಡ್‌ಗಳನ್ನು ರಸ್ತೆಗಡ್ಡವಾಗಿ ಇಡಬೇಕು. ಉಳಿದ ಸಂದರ್ಭ ಬದಿಗೆ ಸರಿಸಬೇಕು. ಇಲ್ಲದಿದ್ದರೆ ಎಲ್ಲರಿಗೂ ಸಮಸ್ಯೆ ಎಂದರು. ಇದೇ ಸಂದರ್ಭ ಉಳಿದ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ಸಂಟ್ಯಾರ್ ಶಾಲಾ ಬಳಿ ರಸ್ತೆ ಅಪಘಾತ ವಲಯವಾಗಿದೆ. ಹಲವು ಅಪಘಾತ ಸಂಭವಿಸಿದೆ. ಆದ್ದರಿಂದ ಎರಡು ಬ್ಯಾರಿಕೇಡ್ ಇಡಬೇಕು ಎಂದು ಒತ್ತಾಯಿಸಿದರು. ಅಕೇಶಿಯಾ ಹಾವಳಿ
ಶಾಲಾ ಸುತ್ತಮುತ್ತ ಅಕೇಶಿಯಾ ಮರಗಳದ್ದೇ ಹಾವಳಿ. ಇವುಗಳನ್ನು ಕತ್ತರಿಸುವಂತೆ ವಿದ್ಯಾರ್ಥಿನಿ ಮುರ್ಷಿದಾ ಆಗ್ರಹಿಸಿದರು. ಉತ್ತರಿಸಿದ ಸಂಟ್ಯಾರ್ ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ್ ಆರ್ಯಾಪು, ಕಾನೂನು ಪ್ರಕಾರ ಮರ ಕಡಿಸಿದರೂ ಮಾಹಿತಿ ಹಕ್ಕಿನಲ್ಲಿ ಪ್ರಶ್ನಿಸಿ ಕಿರುಕುಳ ನೀಡುತ್ತಾರೆ. ಇದಕ್ಕಾಗಿ ಶಿಕ್ಷಕರು ಒಂದು ವಾರ ಅಲೆದಾಡಿದ್ದಾರೆ. ಆದ್ದರಿಂದ ಶಾಲಾ ವತಿಯಿಂದ ಈ ಬಗ್ಗೆ ಕ್ರಮ ಕೈಗೊಳ್ಳಲು ಅಸಾಧ್ಯ. ಗ್ರಾ.ಪಂ. ನಿರ್ಣಯ ಕೈಗೊಂಡರೆ ಉತ್ತಮ ಎಂದರು. ಪ್ರವಾಸವಿಲ್ಲವೇ?
ಪ್ರವಾಸ ಹೋಗುವ ಎಂದು ಆಸೆ ಹುಟ್ಟಿಸುತ್ತಾರೆ. ಇದೀಗ ಶಿಕ್ಷಕರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿ ದೀಪಕ್ ದೂರಿಕೊಂಡರು. ಉತ್ತರಿಸಿದ ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ್, ಮೈಸೂರಿಗೆ ಮಾತ್ರ ಪ್ರವಾಸ ಇಟ್ಟುಕೊಳ್ಳಿ ಎಂದದ್ದಕ್ಕೆ ಸಮಸ್ಯೆಯಾದದ್ದು. ಎರಡು ದಿನ ಬರಲು ಶಿಕ್ಷಕರಿಗೆ ಸಮಸ್ಯೆಯಾಗಿದೆ. ಹಿಂದಿನ ಬಾರಿಯೂ ಹೋಗಲು ಆಗಲಿಲ್ಲ. ಆದ್ದರಿಂದ ಈ ಬಾರಿ ಪ್ರವಾಸ ಇಟ್ಟುಕೊಳ್ಳುವ. ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಅಂಗನವಾಡಿಗೆ ಆವರಣ ಬೇಕು
ಸಂಟ್ಯಾರ್ ಅಂಗನವಾಡಿಗೆ ಆವರಣ ಗೋಡೆ ಇಲ್ಲ. ಪುಟಾಣಿಗಳು ಅಂಗನವಾಡಿಯಲ್ಲಿದ್ದಾಗಲೇ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಾತ್ರವಲ್ಲ ರಜಾ ದಿನಗಳಲ್ಲಿ ಹೊರಗಿನ ವ್ಯಕ್ತಿಗಳಿಂದ ತೊಂದರೆಯಾಗಿದೆ. ಶೌಚಾಲಯದ ಬಾಗಿಲಿಗೆ ರಂಧ್ರ ಕೊರೆದಿದ್ದಾರೆ ಎಂದು ಕಾರ್ಯಕರ್ತೆ ಶಾಂತಿ ಹೆಗ್ಡೆ ಅಲವತ್ತುಕೊಂಡರು. ಉತ್ತರಿಸಿದ ಉಪಾಧ್ಯಕ್ಷ ವಸಂತ್, ಈ ಬಗ್ಗೆ ನರೇಗಾದಡಿ ಕಾಮಗಾರಿ ನಡೆಸಲಾಗುವುದು ಎಂದರು. ಕ್ರಮಕ್ಕೆ ಒತ್ತಾಯ
ಕುರಿಯ ಶಾಲೆ ವಠಾರದಲ್ಲಿ ಮದ್ಯಪಾನ ಮಾಡುತ್ತಾರೆ. ಶಾಲೆ ಬಿಟ್ಟ ಬಳಿಕ ಹೊರಗಿನ ವ್ಯಕ್ತಿಗಳು ಆವರಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕ್ರಮ ಕೈಗೊಳ್ಳುವಂತೆ ಆಶಿಕಾ ಒತ್ತಾಯಿಸಿದರು. ಕುರಿಯ ಶಾಲೆ ಬಳಿ ಕೋಳಿ ಫಾರ್ಮ್ ಇದೆ. ಶಾಲೆಗೆ ಕೆಟ್ಟ ವಾಸನೆ ಬರುತ್ತಿದೆ. ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿ ಆಗ್ರಹಿಸಿದರು. ಕುಂಜೂರುಪಂಜದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ಸೂಕ್ತ ತೊಟ್ಟಿ ವ್ಯವಸ್ಥೆ ಮಾಡುವಂತೆ ಅನುಶ್ರೀ ಅವರು ಒತ್ತಾಯಿಸಿದರು.