Advertisement

ಮಾಧ್ಯಮಗಳಿಗೆ ಮಕ್ಕಳ ಭವಿಷ್ಯದ ಹೊಣೆಗಾರಿಕೆ ಇರಲಿ

03:31 PM Apr 08, 2017 | Team Udayavani |

ಕಲಬುರಗಿ: ದೇಶದ ಉಜ್ವಲ ಭವಿಷ್ಯದ ನಾಗರಿಕರಾಗುವ ಮಕ್ಕಳ ಕುರಿತು ಮಾಧ್ಯಮಗಳಿಗೆ ಹೊಣೆಗಾರಿಕೆ ಇರಬೇಕು. ಅದರಿಂದ ಮಾತ್ರವೇ ಪರಿಸರದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಹೇಳಿದರು.

Advertisement

ಶುಕ್ರವಾರ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತಾಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯೂನಿಸೆಫ್‌ ಮಕ್ಕಳ ರಕ್ಷಣಾ ಯೋಜನೆ ಮತ್ತು ಫರ್ಬಿಂಡನ್‌ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಾಧ್ಯಮ ಕುರಿತು ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಮಾಧ್ಯಮಗಳಿಗೆ ಇದೊಂದು ದೊಡ್ಡ ಮತ್ತು ಮಹತ್ವದ ಹೊಣೆಗಾರಿಕೆ. ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಮನಸ್ಸು ಮಾಡಬೇಕು. ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅವರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕು. ಮಕ್ಕಳ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಿಸುವ ಹಾಗೂ ಉಜ್ವಲ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಸಮರ್ಪಣಾ ಮನೋಭಾವದಿಂದ, ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು. 

ಮಕ್ಕಳ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದಾಗಿದೆ. ಮಾಧ್ಯಮಗಳು ನಿರಂತರವಾಗಿ ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಮಾಹಿತಿಯನ್ನು ಜನರಿಗೆ ತಲುಪಿಸುತ್ತವೆ. ಅದೇ ರೀತಿ ಅಧಿಕಾರಿಗಳು ನಿಷ್ಠೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಶಕ್ತಿ ಮಾಧ್ಯಮಕ್ಕಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸಿದಾಗ ನಿಗದಿತ ಗುರಿ ತಲುಪಲು ಸಾಧ್ಯ ಎಂದು ಹೇಳಿದರು.

ಅಂಕಣಕಾರ ಸತೀಶ ಚಪ್ಪರಿಕ ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ಮಾಧ್ಯಮ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾಗಾರ ಏರ್ಪಡಿಸಿದ್ದು, ಈಗ ಎರಡನೇ ಕಾರ್ಯಾಗಾರ ಕಲಬುರಗಿಯಲ್ಲಿ ಆಯೋಜಿಸಲಾಗಿದೆ. ಏ. 21ರಂದು ಬೆಳಗಾವಿ ಮತ್ತು ಏಪ್ರಿಲ್‌ 28ರಂದು ಮೈಸೂರಿನಲ್ಲಿ ಈ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್‌ ಸ್ವಾಗತಿಸಿದರು. 

Advertisement

ಮಕ್ಕಳ ರಕ್ಷಣಾ ಘಟಕದ ಕಾನೂನು ಅಧಿಕಾರಿ ಭರತೇಶ ಶೀಲವಂತರ ನಿರೂಪಿಸಿದರು. ಯುನಿಸೆಫ್‌ ಮಕ್ಕಳ ರಕ್ಷಣಾ ಯೋಜನೆ ಪ್ರಾದೇಶಿಕ ಸಮನ್ವಯಾಧಿಕಾರಿ ಕೆ.ರಾಘವೇಂದ್ರ ಭಟ್‌ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸಂರಕ್ಷಣೆ ಕುರಿತು ಇರುವ ವಿವಿಧ ಕಾಯ್ದೆ ಕಾನೂನುಗಳ ಬಗ್ಗೆ ಹಾಗೂ ಮಾಧ್ಯಮಗಳು ಅನುಸರಿಸುವ ವಿಧಿ ವಿಧಾನಗಳ ಬಗ್ಗೆ ವಿವರಿಸಿದರು.

ಕರ್ನಾಟಕದ ಯುನಿಸೆಫ್‌ ಯೋಜನೆಗಳ ಸಂಪನ್ಮೂಲ ವ್ಯಕ್ತಿ ಸಿಸ್ಟರ್‌ ಡುಲ್ಸಿನ್‌ ಕ್ರಸ್ಟಾ ಅವರು ಮಕ್ಕಳ ಸೂಕ್ಷ್ಮತೆ ಮತ್ತು ಮಕ್ಕಳ ಸೆಹಿ ಮಾಧ್ಯಮ ವರದಿಗಳ ಬಗ್ಗೆ ವಿವರಿಸಿದರು. ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಿ. ಚಂದ್ರಕಾಂತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್‌, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಿ.ವಿ.ರಾಮಣ್ಣ ಹಾಜರಿದ್ದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಘವೇಂದ್ರ, ಸಿಸ್ಟರ್‌ ದುಲ್ಶನ್‌ ಆಗಮಿಸಿದ್ದರು. 23.33ಮಕ್ಕಳ ಇಲಾಖೆ ಕಾನೂನು ಸಲಹೆಗಾರ ಭರತೇಶ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next