Advertisement

ಗ್ರಾಮೀಣ ಸೊಗಡಿನಲ್ಲಿ ಕಳೆಗಟ್ಟಿದ ಮಕ್ಕಳ ಚಿತ್ರೋತ್ಸವ –ನಾಟಕೋತ್ಸವ 

08:15 AM Mar 09, 2018 | |

ಪೆರ್ಡೂರಿನಂತಹ ಗ್ರಾಮೀಣ ಪರಿಸರದಲ್ಲಿ ಚಲನಚಿತ್ರೋತ್ಸವ ಮತ್ತು ನಾಟಕೋತ್ಸವ ಸಂಘಟಿಸುವುದು ಒಂದು ಸಾಧನೆಯೇ ಸರಿ. ಇತ್ತೀಚೆಗೆ ಪೆರ್ಡೂರು ಪ್ರೌಢ ಶಾಲೆಯ ಬಯಲು ರಂಗ ಮಂಟಪದಲ್ಲಿ ಶಿಕ್ಷಕ ಜಿ. ಪಿ. ಪ್ರಭಾಕರ ತುಮರಿ ಸಂಘಟಿಸಿದ “ಅನಂತ ಮಕ್ಕಳ ಚಲನಚಿತ್ರೋತ್ಸವ ಮತ್ತು ನಾಟಕೋತ್ಸವ’ ಈ ಸಾಧನೆಗೆ ಸಾಕ್ಷಿಯಾಗಿತ್ತು. ತನ್ನ ಶಿಷ್ಯರು ಮತ್ತು ದಾನಿಗಳ ಸಹಕಾರದಿಂದ ಅನಂತಪದ್ಮನಾಭ ದೇವರ ಹೆಸರಿನಲ್ಲಿ ಈ ಸಾಂಸ್ಕೃತಿಕ ಉತ್ಸವ ಸಂಘಟಿಸಿದ ತುಮರಿ ಅವರದು ಏಕವ್ಯಕ್ತಿ ಪರಿಶ್ರಮ. ಮಕ್ಕಳಿಗೆ, ರಂಗಾಸಕ್ತರಿಗೆ ಕಲೆಯ ರಸದೌತಣವನ್ನು ಬಡಿಸಬೇಕೆಂದು ಪಣತೊಟ rಅವರ ಸಾಹಸ ಊರಿನವರ ಮೆಚ್ಚುಗೆಗೆ ಪಾತ್ರವಾಗಿದೆ.  ಅನಂತ ಚಲನಚಿತ್ರೋತ್ಸವ

Advertisement

 ಮೊದಲ ದಿನ ಮಕ್ಕಳ ಚಲನಚಿತ್ರೋತ್ಸವವು ಶಾಲೆಯ ಆಡಿಯೋ ವಿಷುವಲ್‌ ಹಾಲ್‌ನಲ್ಲಿ ನಡೆಯಿತು. ಎಂಐಸಿ ಪ್ರಾಧ್ಯಾಪಕ ವಿನ್ಯಾಸ ಹೆಗಡೆ ಸಿನಿಮಾದ ಭಾಷೆ, ತಂತ್ರ ಮತ್ತು ಆಶಯದ ಬಗ್ಗೆ ಒಳನೋಟದ ಮಾತುಗಳನ್ನಾಡಿದರು. ಉಡುಪಿ ವಿದ್ಯಾಂಗ ಉಪ ನಿರ್ದೇಶಕ ಶೇಷಶಯನ ಪಠ್ಯಪೂರಕ ಚಟುವಟಿಕೆಯ ಮಹತ್ವ ವಿವರಿಸಿದರು. ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ ಕಲಾತ್ಮಕ ಚಲನಚಿತ್ರ ಪ್ರದರ್ಶನ ಮಕ್ಕಳಿಗೆ ಹೊಸ ಅನುಭವ ನೀಡಿತು. ಟಿ.ಎಸ್‌. ನಾಗಾಭರಣ ನಿರ್ದೇಶನದ “ಚಿನ್ನಾರಿ ಮುತ್ತ’, ಎಂ. ಮಣಿಕಂಠನ್‌ ನಿರ್ದೇಶನದ “ಕಾಕಾ ಮುತ್ತೈ’, ಚಾರ್ಲಿ ಚಾಪ್ಲಿನ್‌ ನಿರ್ದೆಶನದ “ದಿ ಕಿಡ್‌’, ಪಿ. ಎನ್‌. ರಾಮಚಂದ್ರ ನಿರ್ದೇಶನದ “ಪುಟಾಣಿ ಪಾರ್ಟಿ’, ಮಾಸ್ಟರ್‌ ಕಿಶನ್‌ ನಿರ್ದೇಶನದ “ಕೇರ್‌ ಆಫ್ ಪುಟ್‌ಪಾತ್‌’ ಮಕ್ಕಳ ಮನಸೆಳೆದವು. ಜನಪ್ರಿಯ ಚಿತ್ರಗಳ ಕ್ರೌರ್ಯ, ಅಬ್ಬರ, ಹಿಂಸೆ,ಅಸಹ್ಯಗಳನ್ನು ನೋಡಿ ಬೇಸತ್ತಿದ್ದ ಮಕ್ಕಳ ಮನಸ್ಸಿನಲ್ಲಿ ಈ ಚಿತ್ರಗಳು ಹೊಸ ಲೋಕವನ್ನೇ ಸೃಷ್ಟಿಸಿದವು. 


ಎರಡನೇ ದಿನ ಪ್ರದರ್ಶನಗೊಂಡ ನಾಟಕ “ಸಂದೇಹ ಸಾಮ್ರಾಜ್ಯ’. ನಿರ್ದೇಶಿಸಿದವರು ಖ್ಯಾತ ರಂಕರ್ಮಿ ಮಂಜುನಾಥ ಬಡಿಗೇರ. ಪ್ರದರ್ಶನ ನೀಡಿದ ತಂಡ ಕೆ. ವಿ. ಸುಬ್ಬಣ್ಣ ರಂಗ ಸಮೂಹ, ಹೆಗ್ಗೊàಡು. ಮನುಷ್ಯ ಸಂಬಂಧಗಳಲ್ಲಿ ಅತಿ ಸಂಕೀರ್ಣವಾದ ಸಂಬಂಧವೆಂದರೆ ಗಂಡು ಹೆಣ್ಣಿನ ಸಂಬಂಧ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ಇನ್ನೂ ಸೂಕ್ಷ್ಮ. ಗಟ್ಟಿ ಎಳೆದರೆ ಹರಿದು ಹೋಗುತ್ತದೆ. ಎಳೆಯದಿದ್ದರೆ ಮುದುಡಿ ಬಿಡುತ್ತದೆ ಎಂಬಂತಹ ರೀತಿ. ಈ ಸಂಬಂಧ ಹಲವು ಬಾರಿ ಗಟ್ಟಿಯಾಗುತ್ತದೆ. ಕೆಲವು ಬಾರಿ ನಾಶವಾಗಿ ಬಿಡುತ್ತದೆ. ಸಂಪೂರ್ಣ ನಂಬಿಕೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ಆಧರಿಸಿರುವ ಈ ಕೌಟುಂಬಿಕ ವಸ್ತುವನ್ನು ಈ ಸಂದೇಹ ಸಾಮ್ರಾಜ್ಯ ಬಿಚ್ಚಿಡುತ್ತದೆ. 

ಕುಟುಂಬ ಮತ್ತು ಗಂಡ-ಹೆಂಡತಿ ಸಂಬಂಧವನ್ನು ಇಂದಿನ ಧಾರಾವಾಹಿ, ಸಿನೆಮಾಗಳು ಅಪಹಾಸ್ಯಕೀಡು ಮಾಡುತ್ತಿರುವ ಸಂದರ್ಭದಲ್ಲಿ ಈ ನಾಟಕದ ಆಶಯ ಮುಖ್ಯವಾಗಿದೆ. ಹೆಸರೇ ಸೂಚಿಸುವಂತೆ ಅನುಮಾನದ ಪಿಶಾಚಿ ಇಡೀ ನಾಟಕವನ್ನು ಆವರಿಸಿಕೊಂಡಿದೆ. ಹಾಸ್ಯಮಯ ಮಾತು, ಘಟನೆ, ಅಭಿನಯ ಮತ್ತು ರಂಗಸಂಗೀತ ಇಡೀ ನಾಟಕದ ಆಕರ್ಷಣೆಯಾಗಿದೆ. ವಿಜಯರಾಯರಾಗಿ ಅಭಿನಯಿಸಿದ ಯೇಸುಪ್ರಕಾಶ ಮತ್ತು ಪೂರ್ಣಿಮಾದೇವಿ ಪಾತ್ರದ ಶೈಲಜಾ ಪ್ರಕಾಶ, ಹಾಗೂ ಶತತಾರಾ ಪಾತ್ರ ನಿರ್ವಹಿಸಿದ ಪದ್ಮಶ್ರೀ, ಆನಂದರಾಯ ಪಾತ್ರಧಾರಿ ಪ್ರಸನ್ನ ಮೆಚ್ಚುಗೆ ಗಳಿಸಿದರು. ಒಟ್ಟಾರೆ ಹಾಸ್ಯಮಯವಾದರೂ ಅರ್ಥಪೂರ್ಣ ನಾಟಕ ನೋಡಿದ ಅನುಭವವಾಯಿತು.

ಮೂರನೇ ದಿನ ಉಡುಪಿ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ “ಇಂಗಾಲದ ಹೆಜ್ಜೆಗಳು’ ವಿಜ್ಞಾನ ನಾಟಕ ಪ್ರೇಕ್ಷಕರನ್ನು ಅವಾಕ್ಕಾಗುವಂತೆ ಮಾಡಿತು. ಮಕ್ಕಳ ಅಭಿನಯ ಮತ್ತು ವಸ್ತು, ನಿರ್ದೇಶನ ಪ್ರತಿಯೊಂದು ಅತ್ಯುತ್ತಮವಾಗಿತ್ತು. ರಾಷ್ಟ್ರಮಟ್ಟದಲ್ಲಿ “ಶ್ರೇಷ್ಠ ವಿಜ್ಞಾನ ನಾಟಕ’ ಗೌರವಕ್ಕೆ ಪಾತ್ರವಾಗಿದ್ದ ಈ ನಾಟಕ ಪೆರ್ಡೂರಿನ ಜನಮನ ಗೆದ್ದಿತು. ಉದಯೋನ್ಮುಖ ರಂಗಕರ್ಮಿ ವಿನಯ ಸುವರ್ಣ ನಿರ್ದೇಶಸಿದ ನಾಟಕ ಗಂಭಿರ ವಸ್ತುವನ್ನು ಅರ್ಥಪೂರ್ಣವಾಗಿ ತೋರಿಸಿತು. 

ಕೈಗಾರಿಕೀಕರಣ, ನಗರೀಕರಣದಿಂದ ಪರಿಸರದ ಮೇಲೆ ಆಗುತ್ತಿರುವ ಮಾರಕ ಪರಿಣಾಮದ ಬಗ್ಗೆ ಬೆಳಕು ಚೆಲ್ಲುವ ಈ ನಾಟಕ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ. ಮಾಲಿನ್ಯ ನಿಯಂತ್ರಣಕ್ಕೆ ಸಾಂಪ್ರದಾಯಿಕ ಅಕ್ಷಯ ಇಂಧನ ಬಳಕೆಯ ಮಹತ್ವ ಸಾರುತ್ತದೆ. ವಿದ್ಯಾರ್ಥಿಗಳಾದ ಅತುಲ್ಯಾ, ನರಸಿಂಹ, ವಿದ್ಮಹಿ, ಶ್ರೀವತ್ಸ, ಪ್ರತೀಕ್‌, ಸಂಜನಾ, ಪ್ರಿಯಂವದಾ, ಶ್ರದ್ಧಾ ಉತ್ತಮವಾಗಿ ಅಭಿನಯಿಸಿ ಪ್ರಶಂಸೆಗೆ ಪಾತ್ರರಾದರು. ರಂಗಸಜ್ಜಿಕೆ, ಅಭಿನಯ, ಸಂಗೀತದ ಹಿನ್ನೆಲೆ ಎಲ್ಲವೂ ಉತ್ತಮವಾಗಿ ಮೂಡಿಬಂತು. ವಿಜ್ಞಾನದಂತಹ ಜಡ ವಿಷಯಗಳನ್ನು ತುಂಬಾ ನಾಟಕೀಯವಾಗಿ ಅಭಿನಯಿಸಿ ವಿಶಿಷ್ಟ ರಂಗಕೃತಿಯಾಗಿಸಿದ ವಿನಯ ಸುವರ್ಣ ಅವರಿಗೆ ಅಭಿನಂದನೆ ಹೇಳಲೇಬೇಕು. 

Advertisement

ಕೊನೆಯ ದಿನ ನಡೆದ ತುಳು ನಾಟಕ “ಚಂದ್ರೆ ಎನ್ನೊಟ್ಟುಲೆ’. ಮೂಲ ಕವಿ ಜಯಂತ ಕಾಯ್ಕಿಣಿ. ಇದರ ತುಳು ಅನುವಾದ ಉದ್ಯಾವರ ನಾಗೇಶಕುಮಾರ್‌. ನಿರ್ದೇಶನ ಸಂತೋಷ ನಾಯಕ್‌ ಪಟ್ಲ. ಒಂದು ಮುಸ್ಲಿಂ ತುಂಬು ಕುಟುಂಬದಲ್ಲಿ ನಡೆಯುವ ಬದುಕಿನ ಕಷ್ಟಗಳು ಮತ್ತು ಸಂಘರ್ಷ ಇಲ್ಲಿ ಮುಖ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೋಮುವಾದ ಹೆಚ್ಚುತ್ತಿರುವ ಈ ಕಾಲದಲ್ಲಿ ಈ ನಾಟಕ ಕೆಲವು ಮೂಲಭೂತ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ. ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡುವ ಮತ್ತು ಹಿಂದೂ-ಮುಸ್ಲಿಂ ಸಂಬಂಧ ತೆಳುವಾಗುತ್ತಿರುವ ದುರಂತ ಚಿತ್ರಣ ಕೂಡಾ ಮನ ಕಲುಕುತ್ತದೆ. ನಾಟಕ ನಿರ್ದೇಶಿಸಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಸಂತೋಷ ನಾಯಕ್‌ ಗಮನ ಸೆಳೆದರು. ರಂಗಸಜ್ಜಿಕೆ, ಸಂಗೀತ, ಬೆಳಕು ಎಲ್ಲವೂ ಉತ್ತಮವಾಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. 

ಮೂರು ದಿನಗಳ ಕಾಲ ಪೆರ್ಡೂರಿನ ಗ್ರಾಮೀಣ ಸೊಗಡಿಗೊಂದು ಹೊಸ ಆಶಯ ಮೂಡಿಸಿದ ಈ ಸಾಂಸ್ಕೃತಿಕ ಉತ್ಸವ ಮರೆಯಲಾಗದ್ದು. ಇದೇ ಸಂದರ್ಭದಲ್ಲಿ ಅಪರೂಪದ ನಾಟಕ ಪುಸ್ತಕಗಳ ಪ್ರದರ್ಶನ ಮತ್ತು ಜಿ. ಪಿ. ಪ್ರಭಾಕರ ತುಮರಿ ಅವರ ರಂಗವಿಮಶಾì ಬರಹಗಳ ಪ್ರದರ್ಶನವೂ ನಡೆಯಿತು. ವಿಮರ್ಶಕ ಮುರಳೀಧರ ಉಪಾಧ್ಯ ಉದ್ಘಾಟಿಸಿದ್ದ ಈ ನಾಟಕೋತ್ಸವದ ಸಮಾರೋಪದಲ್ಲಿ ಕವಿ ಗುರುರಾಜ ಮಾರ್ಪಳ್ಳಿ ಆಶಯದ ಮಾತನಾಡಿದರು. ಅನೇಕ ಸಮಾಜದ ಗಣ್ಯರು ಭಾಗವಹಿಸಿದ ಈ ಸಾಂಸ್ಕೃತಿಕ ಉತ್ಸವದ ಯಶಸ್ಸಿಗೆ ಮುಖ್ಯ ಕಾರಣರಾದ ಪ್ರಭಾಕರ ಸರ್‌ ಅವರಿಗೆ ಅಭಿನಂದನೆ ಹೇಳಲೇಬೇಕು.

ಉಷಾರಾಣಿ ಕಾಮತ್‌ 

Advertisement

Udayavani is now on Telegram. Click here to join our channel and stay updated with the latest news.

Next