Advertisement

ಎನ್‌ಆರ್‌ಸಿಗೆ ಮಕ್ಕಳ ದಾಖಲಾತಿ ವಿರಳ 

04:01 PM Nov 05, 2018 | |

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ನೂರೆಂಟು ಯೋಜನೆ ಜಾರಿ ಮಾಡುತ್ತಿವೆ. ಆದರೆ, ಪಾಲಕರಲ್ಲಿನ ನಿಷ್ಕಾಳಜಿ, ಆಸ್ಪತ್ರೆಯಲ್ಲಿನ ಸೌಕರ್ಯಗಳ ಕೊರತೆಯಿಂದ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡಲು ತೆರೆದಿರುವ ಎನ್‌ಆರ್‌ಸಿ ಕೇಂದ್ರಕ್ಕೆ ಮಕ್ಕಳ ದಾಖಲಾತಿ ಕಡಿಮೆಯಿದೆ.

Advertisement

ಹೌದು. ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿಯೇ ಕೊಪ್ಪಳ ಜಿಲ್ಲೆಯ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಪಾಲಕರಲ್ಲಿನ ಅಜ್ಞಾನ, ತಿಳಿವಳಿಕೆಯ ಕೊರತೆಯಿಂದ ಅಲ್ಲಲ್ಲಿ ಮಕ್ಕಳಿಗೆ ಬಾಲ್ಯವಿವಾಹ ಮಾಡಲಾಗುತ್ತಿದೆ. ಬಾಲ್ಯದಲ್ಲೇ ತಾಯ್ತನ ಹೊಂದುವ ಬಾಲೆಯು ಶಿಶುವಿಗೆ ಜನ್ಮ ನೀಡುತ್ತಿದ್ದಾಳೆ. ಮೊದಲೇ ತಾಯಿ ಅಪ್ರಾಪೆ¤ಯಾಗಿದ್ದು, ಅವರಲ್ಲಿ ಆರೋಗ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆಯಿರುತ್ತದೆ. ತನ್ನ ನೋವಿನ ಜೊತೆಗೆ ಮಗುವಿನಲ್ಲೂ ಅಪೌಷ್ಟಿಕತೆ ಕಾಡುತ್ತಾ ಮಗುವಿನ ಜೀವನ ಬೆಳವಣಿಗೆಗೆ ಮಾರಕವಾಗುತ್ತಿದೆ. ಇದನ್ನು ನಿವಾರಿಸಲು ಕೇಂದ್ರ ಸರ್ಕಾರವು ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ (ನ್ಯೂಟ್ರೇಶನ್‌ ರಿಹ್ಯಾಬಿಟೇಶನ್‌ ಸೆಂಟರ್‌) (ಎನ್‌ಆರ್‌ಸಿ) ಆರಂಭ ಮಾಡಿದೆ. ಆದರೆ ಈ ಕೇಂದ್ರಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ತುಂಬ ಕಡಿಮೆಯಿರುತ್ತದೆ.

ಎನ್‌ಆರ್‌ಸಿ ಕೆಲಸವೇನು?: ಐದು ವರ್ಷದೊಳಗಿನ ಮಗು ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೂ ಆ ಮಗುವಿಗೆ ಚಿಕಿತ್ಸೆ ಕೊಡಿಸಿ ಪೌಷ್ಟಿಕತೆ ಹೆಚ್ಚಿಸಲು ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರವನ್ನು 2012ರಲ್ಲಿಯೇ ಆರಂಭಿಸಿದೆ. ವೈದ್ಯರು ಮಗುವಿನ ತಪಾಸಣೆ ವೇಳೆ ಅಪೌಷ್ಟಿಕತೆ ಕೊರತೆ ಕಂಡು ಬಂದರೆ ಕೂಡಲೇ ಈ ಕೇಂದ್ರಕ್ಕೆ ದಾಖಲಾಗಲು ಶಿಫಾರಸ್ಸು ಮಾಡಲಿದ್ದಾರೆ.

ಅಂತಹ ಮಗುವನ್ನು ಈ ಕೇಂದ್ರದಲ್ಲಿ ನಿರಂತರ 14 ದಿನಗಳ ಕಾಲ ದಾಖಲಿಸಿ ಪಾಲಕರು ಚಿಕಿತ್ಸೆ ಕೊಡಿಸುವ ಅವಶ್ಯಕತೆಯಿದೆ. ಪ್ರತಿ ದಿನವೂ ಮಗುವಿನ ಪಾಲಕರಿಗೆ 174 ರೂ. ಸರ್ಕಾರದಿಂದ ಹಣ ಪಾವತಿ ಮಾಡುವ ವ್ಯವಸ್ಥೆಯಿದೆ. ಅಲ್ಲದೇ ಪ್ರತಿ ಮಗುವಿಗೆ ದಿನಕ್ಕೆ 125 ರೂ. ಹಣ ಈ ಕೇಂದ್ರದಿಂದ ಬಿಡುಗಡೆ ಮಾಡುವ ವ್ಯವಸ್ಥೆಯಿದೆ. ಜಿಲ್ಲಾಸ್ಪತ್ರೆಗೆ ಎನ್‌ಎಚ್‌ಎಂನಿಂದ ಈ ವರ್ಷ 1,25 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆಯಿದೆ ಎಂದು ವೈದ್ಯರು ಹೇಳಿದರೂ ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಲ್ಲ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಜನರು ಕಾಳಜಿಯನ್ನೇ ವಹಿಸಲ್ಲ. ವೈದ್ಯರು 14 ದಿನ ಕೇಂದ್ರಕ್ಕೆ ದಾಖಲಿಸಿ ಎಂದರೂ ಪಾಲಕರು ಕನಿಷ್ಟ 10 ದಿನವೂ ದಾಖಲು ಮಾಡುವುದಿಲ್ಲ. ನಾವೂ ದಾಖಲು ಮಾಡಿ ನಿಮ್ಮ ಮಗುವಿನ ಆರೋಗ್ಯಕ್ಕೆ ಒತ್ತು ನೀಡಿ ಎಂದರೂ ಪಾಲಕರು ಕಾಳಜಿ ವಹಿಸುತ್ತಿಲ್ಲ ಎನ್ನುತ್ತಿದೆ ಆರೋಗ್ಯ ಇಲಾಖೆ. ಅಲ್ಲದೇ ಕೇಂದ್ರ ಸರ್ಕಾರ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಈ ಕೇಂದ್ರ ತೆರೆದಿದೆ. ಜೊತೆಗೆ ಆರೋಗ್ಯ ಇಲಾಖೆಯಲ್ಲಿನ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ, ತಿಳಿವಳಿಕೆ ಮೂಡಿಸಿದರೆ ಎಲ್ಲವೂ ಸದ್ಬಳಕೆಯಾಗಲಿವೆ.

Advertisement

ತಾಲೂಕಾಸ್ಪತ್ರೆಯಲ್ಲಿ ಕೇಂದ್ರ ಆರಂಭಿಸಲಿ: ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಆರಂಭಿಸಿದೆ. ಆದರೆ ಉಳಿದ ತಾಲೂಕಿನ ಜನರಿಗೆ ಇದರ ಸೌಲಭ್ಯ ದೊರೆಯಲ್ಲ. ಜಿಲ್ಲಾಸ್ಪತ್ರೆಗೆ ಬರುವುದೆಂದರೆ ತುಂಬ ಹೊರೆಯಾಗಲಿದೆ. ಆಯಾ ತಾಲೂಕು ಆಸ್ಪತ್ರೆಗಳಲ್ಲಿಯೇ ಸರ್ಕಾರ ಎನ್‌ಆರ್‌ಸಿ ಕೇಂದ್ರ ಆರಂಭ ಮಾಡುವ ಜೊತೆಗೆ ಅಪೌಷ್ಟಿಕ ಮಕ್ಕಳ ಪಾಲಕರಲ್ಲಿ ಇಂತಹ ಯೋಜನೆಯ ಕುರಿತು ಜಾಗೃತಿ ಮೂಡಿಸಿದರೆ ಈ ಭಾಗದಲ್ಲಿನ ಮಕ್ಕಳಲ್ಲಿ ಅಪೌಷ್ಟಿಕತೆ ತೊಲಗಲು ಸಾಧ್ಯವಿದೆ. ಇಲ್ಲದಿದ್ದರೆ ಮಕ್ಕಳ ಬೆಳವಣಿಗೆಗೆ ಅಪೌಷ್ಟಿಕತೆ ಬಾಧಿಸಲಿದೆ.

ಸರ್ಕಾರ ಜಿಲ್ಲಾ ಆಸ್ಪತ್ರೆಗೆ ಒಂದೇ ಎನ್‌ ಆರ್‌ಸಿ ಕೇಂದ್ರ ಆರಂಭಿಸಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಆರಂಭಕ್ಕೆ ನಾವು ಮನವಿ ಮಾಡಿದ್ದೇವೆ. ಇನ್ನೂ ಅಪೌಷ್ಟಿಕ ಮಕ್ಕಳನ್ನು ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಪಡೆಯಿರಿ ಎಂದು ಪಾಲಕರಿಗೆ ಹೇಳಲಾಗುತ್ತದೆ. ಆದರೆ ಪಾಲಕರು 14 ದಿನಗಳ ಕಾಲ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿಲ್ಲ.
ಡಾ| ಅಲಕನಂದ ಮಳಗಿ
ಆರ್‌ಸಿಎಚ್‌ ಅಧಿಕಾರಿ, ಕೊಪ್ಪಳ.

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next