Advertisement

“ಎಲೆಮರೆಯ ಕಾಯಿಗಳನ್ನು ಗುರುತಿಸಿದರೆ ಸಾಧನೆಗೆ ಹುರುಪು’

12:34 PM Nov 18, 2019 | Sriram |

ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ ವಿಭಿನ್ನ ವೃತ್ತಿ ಸಾಧಕರೊಂದಿಗೆ ಸಂವಾದ ಬುಧವಾರ ಏರ್ಪಡಿಸಲಾಗಿತ್ತು. ಎಲ್ಲೆಡೆಯೂ ಹತ್ತಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ಹೊಸ ಚಿಂತನೆ ಬದುಕಿನ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂಬ ಅಭಿಪ್ರಾಯ ಶಿಕ್ಷಣ ಅಧಿಕಾರಿಗಳಿಂದ, ಶಾಲಾ ಮುಖ್ಯಸ್ಥರಿಂದ ಕೇಳಿ ಬಂತು. ಹೊಸ ಮಾಲಿಕೆಗೆ ಸಹಕರಿಸಿದ ಎಲ್ಲ ಶಾಲೆಗಳಿಗೂ ಅಭಿನಂದನೆಗಳು.

Advertisement

ಕಾರ್ಕಳ: ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಗಳಂತಿರುವ ಹಲವಾರು ಪ್ರತಿಭೆಗಳನ್ನು ವರದಿಗಳ ಮೂಲಕ ಗುರುತಿಸಿ, ಪ್ರೋತ್ಸಾಹಿಸಿದ ಹಿರಿಮೆ
“ಉದಯವಾಣಿ’ಯದ್ದು. ಇದರಿಂದ ಅದೆಷ್ಟೋ ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಿದೆ…

ಇದು ಅಂತಾರಾಷ್ಟ್ರೀಯ ಪವರ್‌ಲಿಫ್ಟರ್‌ ಸ್ವಾತಿ ಯು.ಕೆ. ವ್ಯಕ್ತಪಡಿಸಿದ ಅಭಿಪ್ರಾಯ. ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ಯು ಮಕ್ಕಳ ದಿನಾಚರಣೆಯ ಪ್ರಯುಕ್ತ ನ.13ರಂದು ಏರ್ಪಡಿಸಿದ ಸಾಧಕರ “ಜೀವನಕಥನ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಕಳ ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೇಸೀಸ್‌ ಶಾಲೆ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕ್ರೀಡಾ ಕ್ಷೇತ್ರದಲ್ಲಿ ನಾನು ಮಾಡಿರುವ ಸಾಧನೆಗಳ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಪರಿಣಾಮ ನಾನಿಂದು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಕರಾವಳಿ ಭಾಗದ ಪ್ರಮುಖ ಪತ್ರಿಕೆ ಉದಯವಾಣಿ ಪ್ರತಿಯೊಂದು ಕ್ಷೇತ್ರದ ಸಾಧಕರಿಗೂ ಅನನ್ಯ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸ್ವಾತಿ ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೆಂಕಟರಮಣ ಕಲ್ಕೂರ ಮಾತನಾಡಿ, ಕಾರ್ಯಕ್ರಮಗಳು ಕೇವಲ ಭಾಷಣಗಳಿಗೆ ಸೀಮಿತವಾಗುತ್ತಿರುವ ದಿನಮಾನದಲ್ಲಿ ಉದಯವಾಣಿ “ಜೀವನ ಕಥನ’ ಮೂಲಕ ಸಾಧಕರೊಂದಿಗೆ ಸಂವಾದ ಏರ್ಪಡಿಸಿ, ಎಳವೆಯಲ್ಲೇ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿರುವುದು ಸ್ತುತ್ಯರ್ಹ ಎಂದರು.

Advertisement

ಪತ್ರಿಕೆಗಳು ವಸ್ತುನಿಷ್ಠ ವರದಿಯೊಂದಿಗೆ ಸಮಾಜಮುಖೀ ಕಾರ್ಯಕ್ರಮಗಳ ಮೂಲಕ ಜನತೆಗೆ ಮತ್ತಷ್ಟು ಹತ್ತಿರವಾಗಿರುವ ಉದಯವಾಣಿ ಸಂವಾದದ ಮೂಲಕ ಒಂದು ವಿನೂತನ, ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದು ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳದ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ ಶ್ಲಾಘಿಸಿದರು.

ಸ್ವಾತಿ ಅವರೊಂದಿಗೆ ಸಂವಾದ

ಗ್ರಾಮೀಣ ಭಾಗದಿಂದ ನೀವು ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಬಗೆ ಹೇಗೆ?
ಸಂಜನಾ, ಜೇಸೀಸ್‌ ಶಾಲೆ
– ನಿರ್ದಿಷ್ಟ ಗುರಿ, ಸತತ ಪರಿಶ್ರಮ, ಅಚಲವಾದ ಆತ್ಮವಿಶ್ವಾಸವೊಂದಿದ್ದರೆ ಗ್ರಾಮೀಣ ಭಾಗ ಅಥವಾ ಇನ್ನಿತರ ಕಾರಣಗಳು ಸಾಧನೆಗೆ ಅಡ್ಡಿಯಾಗಲಾರದು.

ತಮಗೆ ಸ್ಫೂರ್ತಿ ಯಾರು ?
ಅನ್ನಪೂರ್ಣ, ಪೆರ್ವಾಜೆ ಶಾಲೆ
-ನನ್ನ ಸಾಧನೆಯ ಹಿಂದೆ ಅಮ್ಮ ಗೀತಾ ಹಾಗೂ ಕೋಚ್‌ ಪ್ರದೀಪ್‌ ಆಚಾರ್ಯ ಅವರ ಸಹಕಾರ, ತ್ಯಾಗವಿದೆ. ಅವರೇ ನನಗೆ ಸ್ಫೂರ್ತಿ.

ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಲ್ಲಿ ವಿದ್ಯಾಭ್ಯಾಸಕ್ಕೆ ತೊಡಕಾಗುವುದಿಲ್ಲವೇ ?
ಸೋನಲ್‌, ಎಸ್‌ಎನ್‌ವಿ ಶಾಲೆ
-ಶಿಕ್ಷಣಕ್ಕೆ ಆದ್ಯತೆ ನೀಡುವುದು ಅತಿ ಅಗತ್ಯ. ಭವಿಷ್ಯದಲ್ಲಿ ಏನಾಗಬೇಕೆಂದು ನಿರ್ಧರಿಸಿರುತ್ತೇವೆಯೋ ಆ ಹಾದಿಯಲ್ಲೇ ಸಾಗಬೇಕು.

ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕ್ಷಣ ಹೇಗಿತ್ತು ?
ಸೃಷ್ಠಿ, ಜೇಸೀಸ್‌ ಶಾಲೆ
– ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವುದೇ ಹೆಮ್ಮೆ. ರಾಷ್ಟ್ರಧ್ವಜ ಹೆಗಲೇರಿದಾಗ ಆದ ರೋಮಾಂಚನ ವರ್ಣನಾತೀತ.

ನಿಮ್ಮ ಜೀವನದ ಟರ್ನಿಂಗ್‌ ಪಾಯಿಂಟ್‌ ಯಾವುದು?
ಶ್ರೀಜಾ, ಜೇಸೀಸ್‌ ಶಾಲೆ
ಎಳವೆಯಲ್ಲೇ ನಾನು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಕೊಂಡ ಪರಿಣಾಮ ಅದೇ ಹಾದಿಯಲ್ಲಿ ಮುಂದುವರಿದೆ.

ಪೆರ್ವಾಜೆ ಶಾಲೆ: ಕ್ರೀಡಾಕ್ಷೇತ್ರದ ಅಡೆತಡೆಗಳನ್ನು ಹೇಗೆ ನಿಭಾಯಿಸಿದಿರಿ ?
ದಿವ್ಯಾ ದೇವಾಡಿಗ,ಪೆರ್ವಾಜೆ
-ಎಲ್ಲ ಕ್ಷೇತ್ರದಲ್ಲೂ ಅಡೆತಡೆಗಳು ಎದುರಾಗುವುದು ಸಾಮಾನ್ಯ. ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ.

Advertisement

Udayavani is now on Telegram. Click here to join our channel and stay updated with the latest news.

Next