Advertisement

ಮಕ್ಕಳ ದಿನಾಚರಣೆ: ಮಕ್ಕಳ ಕಲ್ಯಾಣ ಕಾರ್ಯ ನಿರ್ವಹಣೆ ನಮ್ಮೆಲ್ಲರ ಹೊಣೆ: ರಾಜ್ಯಪಾಲರು

11:16 PM Nov 14, 2022 | Team Udayavani |

ಬೆಂಗಳೂರು: ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆ ಹಾಗೂ ಶಿಸ್ತಿನ ದೃಷ್ಟಿಯಿಂದ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ರಾಜ್ಯಪಾಲರು ಥಾವರ್‌ ಚಂದ್‌ ಗೆಹಲೋತ್‌ ಹೇಳಿದರು.

Advertisement

ಸೋಮವಾರ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿಗೆ ತನ್ನ ಮನೆಯೇ ಶಿಕ್ಷಣ, ಸಂಸ್ಕೃತಿ ಹಾಗೂ ಇಡೀ ಜೀವನ ಸಾಮರ್ಥ್ಯದ ಅಡಿಪಾಯ. ಆದ್ದರಿಂದ ಬಾಲ್ಯದಲ್ಲಿ ಹೇಳಿದ ಸ್ಪೂರ್ತಿದಾಯಕ ಕಥೆಗಳು, ಬೋಧನೆಗಳು ಮತ್ತು ಜ್ಞಾನವು ಮಗುವಿನ ಜೀವನದುದ್ದಕ್ಕೂ ಮಾರ್ಗದರ್ಶನ ನೀಡುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ಇಂದಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಪೋಷಿಸಿದರೆ ನಾಳಿನ ಉತ್ತಮ ಮತ್ತು ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ನಾಂದಿಹಾಕಿದಂತಾಗುತ್ತದೆ. ಬಜೆಟ್‌ನಲ್ಲಿ ತಿಳಿಸಿದಂತೆ ಮುಂದಿನ ದಿನಗಳಲ್ಲಿ 4,266 ಅಂಗನವಾಡಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌, ಸಂಸದ ಲೆಹರ್‌ ಸಿಂಗ್‌ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎನ್‌.ಮಂಜುಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ. ಕೆ.ಎನ್‌. ಅನುರಾಧಾ ಇತರರಿ ದ್ದರು.

ಹೊಯ್ಸಳ, ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರು
ಧೈರ್ಯ ಸಾಹಸ ಪ್ರದರ್ಶನ, ಸಮಯ ಪ್ರಜ್ಞೆಯಿಂದ ಇತರರನ್ನು ಪ್ರಾಣಾಪಾಯದಿಂದ ರಕ್ಷಿಸಿದಂತಹ ಮಡಿಕೇರಿ ಜಿಲ್ಲೆಯ ನಮ್ರತಾ, ಶಿವಮೊಗ್ಗ ಜಿಲ್ಲೆಯ ಪ್ರಾರ್ಥನಾ, ಕಾರವಾರ ಜಿಲ್ಲೆಯ ಕೌಶಲ್ಯ ವೆಂಕಟರಮಣ, ದಾವಣಗೆರೆ ಜಿಲ್ಲೆಯ ಕೀರ್ತಿ ವಿವೇಕ್‌ ಎಂ. ಸಾಹುಕಾರ್‌ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾವ್ಯ ಭಾಸ್ಕರ್‌ ಹೆಗಡೆ ಅವರಿಗೆ 2022-23ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಹೊಂದಿದೆ.

Advertisement

ರಾಜ್ಯ ಪ್ರಶಸ್ತಿ ಪುರಸ್ಕೃತರು:
ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಚಿತ್ರದುರ್ಗದ ಕಲಾ ಚೈತನ್ಯ ಸೇವಾ ಸಂಸ್ಥೆ, ಹಾಸನದ ತವರು ಚಾರಿಟಬಲ್‌ ಟ್ರಸ್ಟ್‌, ಹಾವೇರಿಯ ಸ್ಪಂದನ ವಿಶೇಷ ದತ್ತು ಸ್ವೀಕಾರ ಕೆಂದ್ರ ಹಾಗೂ ಕೊಪ್ಪಳದ ಇನ್ನರ್‌ ವ್ಹೀಲ್‌ ಕ್ಲಬ್‌ ಸ್ವಯಂ ಸೇವಾ ಸಂಸ್ಥೆ ಹಾಗೂ ದೊಡ್ಡಬಳ್ಳಾಪುರದ ಡಾ.ಹುಲಿಕಲ್‌ ನಟರಾಜ್‌, ಶಿವಮೊಗ್ಗದ ಡಾ. ಪವಿತ್ರ, ಧಾರವಾಡದ ಭಿಮಣ್ಣಾ ಮಾರುತಿ ಹಲಕುರ್ಕಿ ಹಾಗೂ ಹೊಸಪೇಟೆಯ ಗುಂಡಿ ರಮೇಶ್‌ ಅವರಿಗೆ 2022-23ನೇ ಸಾಲಿನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಬಾಲಮಂದಿರದ ಐದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಮಾಣ ಪತ್ರ ವಿತರಿಸಿದರು.

1.ಕೆರೆಗೆ ಜಿಗಿದು ವೃದ್ಧನ ರಕ್ಷಿಸಿದ್ದ ನಮ್ರತಾ
ನಮ್ರತಾ: ಮಡಿಕೇರಿ ಜಿಲ್ಲೆ ಗೋಣಿಕೊಪ್ಪಲು ಬಳಿಯ ಸೀಗೆತೋಡುವಿನ ನಮ್ರತಾ ಅವರು, ಶಾಲೆಯಿಂದ ಮನೆಗೆ ತೆರಳುವಾಗ, ಕರೆಯ ದಂಡೆಯ ಮೇಲೆ ವೃದ್ಧರೊಬ್ಬರು ಆತ್ಮಹತ್ಯೆಗೆ ಯತ್ನಿಸಿ ಹಾರುವುದನ್ನು ಗಮನಿಸಿದ ಬಾಲಕಿ, ಕೆರೆಗೆ ಜಿಗಿದು, ವೃದ್ಧರ ಅಂಗಿಯನ್ನು ಹಿಡಿದು, ದಂಡೆಯ ಬಳಿ ಎಳೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ವಿದ್ಯುತ್‌ ಸರ್ಶಿಸಿದ್ದ ಸೋದರನ ರಕ್ಷಿಸಿದ ಪ್ರಾರ್ಥನಾ
2. ಪ್ರಾರ್ಥನಾ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಊರಗನಹಳ್ಳಿಯ ಪ್ರಾರ್ಥನಾ ಅವರ ಸಹೋದರ ಮನೆಯಲ್ಲಿ ಟಿ.ವಿ.ಸ್ವಿಚ್‌ ಬೋರ್ಡ್‌ ಸ್ಪರ್ಶಿಸಿದ ಪರಿಣಾಮ ವಿದ್ಯುತ್‌ ಪ್ರವಹಿಸಿ ಶಾಕ್‌ ಹೊಡೆದು ನೋವಿನಿಂದ ನರಳುತ್ತಿದ್ದನ್ನು ಕಂಡು, ಸಮೀಪದಲ್ಲೇ ಇದ್ದ ಪ್ರಾರ್ಥನಾ ಸಮಯ ಪ್ರಜ್ಞೆಯಿಂದ ತಕ್ಷಣವೇ ಸಹೋದರನ ಅಂಗಿಯ ಕಾಲರ್‌ ಹಿಡಿದು ರಭಸವಾಗಿ ಎಳೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಜೀಪ್‌ ಪಲ್ಟಿ: ತಂದೆ ಜೀವ ಉಳಿಸಿದ ಕೌಶಲ್ಯ
3. ಕೌಶಲ್ಯ ವೆಂಕಟರಮಣ ಹೆಗಡೆ: ಕಾರವಾರ ಜಿಲ್ಲೆಯ ಸಿದ್ದಾಪುರದ ಕಾನಸೂರಿನ ಕೌಶಲ್ಯ ವೆಂಕಟರಮಣ ಅವರು ತಂದೆ ಮತ್ತು ಸಹೋದರನೊಂದಿಗೆ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿರ್ಜನ ಪ್ರದೇಶದ ಬಳಿ ಜೀಪ್‌ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು, ಜೀಪಿನಿಂದ ಹೊರಬಂದ ಬಾಲಕಿಯು ಜೀಪ್‌ನಲ್ಲಿ ತಂದೆ ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿರುವುದನ್ನು ನೋಡಿ, ತನ್ನ ಸಹೋದರನನ್ನು ತಂದೆಯ ಬಳಿ ಬಿಟ್ಟು, ಹತ್ತಿರದ ಹಳ್ಳಿಯತ್ತ ಓಡಿ, ಅಲ್ಲಿನ ಜನರಿಗೆ ಮಾಹಿತಿ ನೀಡಿ ಅವರನ್ನು ಕರೆತಂದು ತನ್ನ ತಂದೆಯ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆರೆಗೆ ಬಿದ್ದ ಕಾರು: ಜನ್ಮದಾತರಿಗೆ ಮರುಜನ್ಮ ನೀಡಿದ ಕೀರ್ತಿ
4. ಮಾಸ್ಟರ್‌ ಕೀರ್ತಿ ವಿವೇಕ್‌ ಎಂ. ಸಾಹುಕಾರ್‌: ದಾವಣಗೆರೆ ಜಿಲ್ಲೆಯ ಜಗಳೂರು ವಿದ್ಯಾನಗರದ ನಿವಾ ಸಿ ಕೀರ್ತಿ. 2022ರ ಆ.21ರಂದು ಕುಟುಂಬದವರ ಜತೆ ಪ್ರಯಾಣಕ್ಕೆ ಹೊರಟಾಗ ಕಾರು ಪಲ್ಟಿಯಾಗಿ ಕೆರೆಗೆ ಬಿದಿತ್ತು. ಆಗ ನೀರಿನ ಮೆಟಲ್‌ ಬಾಟಲಿಯಿಂದ ಕಾರಿನ ಗಾಜು ಹೊಡೆದು ಸಮಯ ಪ್ರಜ್ಞೆಯಿಂದ ಎಲ್ಲರನ್ನು ಹೊರಬರುವಂತೆ ಮಾಡಿದ. ಕೈಗೆ ಗಾಯವಾಗಿ ರಕ್ತ ಸೋರುತ್ತಿರುವುದನ್ನು ಲೆಕ್ಕಿಸದೇ ಜನ್ಮದಾತರಿಗೆ ಮರು ಜನ್ಮ ನೀಡಿದ. ಪೊಲೀಸರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಸಾಹಸ ಮೆರೆದಿದ್ದಾರೆ.

ರೈಲು ಹಳಿ ಮೇಲೆ ಬಿದ್ದಿದ್ದ ವೃದ್ಧೆ ರಕ್ಷಿಸಿದ ಕಾವ್ಯ
5. ಕಾವ್ಯ ಭಾಸ್ಕರ್‌ ಹೆಗಡೆ: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿರೂರಿನ ಕಾವ್ಯ ಭಾಸ್ಕರ್‌ ಹೆಗಡೆ. ಮನೆಯಿಂದ ಶಾಲೆಗೆ ಬರುವ ದಾರಿಯಲ್ಲಿ ರೈಲು ಹಳಿ ದಾಟುವಾಗ ವೃದ್ಧೆಯೊಬ್ಬರು ರೈಲು ಹಳಿಯ ಮೇಲೆ ಬಿದ್ದಿರುವುದನ್ನು ಕಂಡು, ಆಕೆ ಅದೇ ಸಮಯಕ್ಕೆ ಸರಿಯಾಗಿ ರೈಲು ಬರುವುದನ್ನು ಗಮನಿಸಿ, ಅಪಾಯದ ಮುನ್ಸೂಚನೆಯನ್ನು ಅರಿತು ತನ್ನ ಪ್ರಾಣವನ್ನು ಲೆಕ್ಕಿಸದೇ, ವೃದ್ಧೆಯನ್ನು ಹಳಿಯ ಮೇಲಿಂದ ದೂರ ಎಳೆದು ತಂದು ತನ್ನ ಸಮಯ ಪ್ರಜ್ಞೆಯಿಂದ ವೃದ್ಧೆಯ ಪ್ರಾಣವನ್ನು ರಕ್ಷಿಸಿ, ಸಾಹಸ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next