Advertisement

ವಿಶೇಷ ಸಾಮರ್ಥ್ಯದ ಮಕ್ಕಳು ಸಮಾಜಕ್ಕೆ ಹೊರೆಯಲ್ಲ: ಬಿಷಪ್‌

11:15 AM Nov 26, 2022 | Team Udayavani |

ಶಿರ್ವ: ವಿಕಲಚೇತನ ಮಕ್ಕಳಿಗೆ ದೇವರು ವಿಶೇಷ ಪ್ರತಿಭೆ ನೀಡಿದ್ದು,ಅದನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ, ಸಹಕಾರ ನೀಡಿದರೆ ಮಕ್ಕಳು ಸಮಾಜದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ವಿಶೇಷ ಸಾಮರ್ಥಯದ ಮಕ್ಕಳು ಸಮಾಜಕ್ಕೆ ಹೊರೆಯಲ್ಲ,ಬದಲಾಗಿ ಸಮಾಜದ ಆಸ್ತಿ ಎಂದು ಉಡುಪಿಯ ಬಿಷಪ್‌ ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು.

Advertisement

ಅವರು ನ. 25 ರಂದು ಪಾಂಬೂರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ರಜತ ಮಹೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಪ್ರೀತಿ ಇದ್ದಲ್ಲಿ ದೇವರಿದ್ದು, ಶಾಂತಿ ಸಂತೋಷವಿರುತ್ತದೆ ಹಾಗೂ ಪ್ರೀತಿಯ ನೆಲೆಯಲ್ಲಿ ಅನೇಕರು ಸೌಹಾರ್ದತೆ ಮತ್ತು ಐಕ್ಯತೆಯಿಂದ ದುಡಿಯಲು ಮುಂದಾಗುತ್ತಾರೆ. ಮಾನಸ ಸಂಸ್ಥೆಯು ಸಮಾಜದ ಆಸ್ತಿಯಾಗಿದ್ದು, ಸಂಸ್ಥೆಯ ಮೂಲಕ ಅತೀ ಕೆಳಸ್ತರದಲ್ಲಿರುವ ವಿಕಲಚೇತನ ಮಕ್ಕಳಿಗೆ ಸಮಾಜದಲ್ಲಿ ಬದುಕು ರೂಪಿಸಲು ಸಾಧ್ಯವಾಗಿದೆ ಎಂದರು.

ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಮಾನವೀಯ ಮೌಲ್ಯಗಳನ್ನು ವೃದ್ಧಿಸುವ,ವಿಕಲಚೇತನರಿಗೆ ಪುನಶ್ಚೇತನ ನೀಡುವ ಸಂಸ್ಥೆಯ ಮಹತ್ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ ವಿಶೇಷ ಮಕ್ಕಳು ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಸ್ಥೆಯು ಮಾನವತ್ವದ ಮಾಣಿಕ್ಯವನ್ನು ಸಮಾಜಕ್ಕೆ ನೀಡಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥ ಮಂಡಳಿ, ಟ್ರಸ್ಟಿಗಳು, ಕೆಥೋಲಿಕ್‌ಸಭೆ ಉಡುಪಿ, ಮಂಗಳೂರ್‌ನ ಪ್ರತಿನಿಧಿಗಳು, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಪ್ರಾಂಶುಪಾಲರು, ಭಗಿನಿಯರು, ಶಿಕ್ಷಕವೃಂದ, ಹಾಸ್ಟೆಲ್‌ ವಾರ್ಡನ್‌ಗಳನ್ನು ಗೌರವಿಸಲಾಯಿತು.

ಜರ್ಮನಿಯ ಧರ್ಮಗುರು ರೆ|ಫಾ| ಜೆಫ್ರಿನ್‌ ಮೋನಿಸ್‌ಮಾನಸ ಸಂಸ್ಥೆ ನಡೆದು ಬಂದ ದಾರಿಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗಿಳಿಸಿ ಮಾತನಾಡಿದರು.

ಸರ್ವೆಂಟ್‌ ಆಫ್‌ ಹೋಲಿ ಸ್ಪಿರಿಟ್‌ನ ಸಿ| ಐಡಾ ಲೋಬೋ, ಜರ್ಮನಿಯ ರುಡರ್ಬರ್ಗ್‌ಲಾರ್ಡ್‌ ಸಿಟಿಯ ಮಾಜಿ ಮೇಯರ್‌ ಹೋರ್ಸ್ಡ್ ಶ್ನೈಡರ್‌ ಮಾತನಾಡಿದರು.

ಮುಂಬಯಿ ಉದ್ಯಮಿ ಮರ್ಕ್ಯುರಿ ಫಿನುಮೆಟಿಕ್ಸ್‌ನ ನೋಯೆಲ್‌ ರಸ್ಕಿನ್ಹಾ, ಮುಂಬಯಿ ಆನ್‌ಶೋರ್‌ ಸಂಸ್ಥೆಯ ಪ್ರತಿನಿಧಿ ಹರೀಶ್‌ ಶೆಟ್ಟಿ, ಜರ್ಮನಿಯ ಮಾರ್ಗಿಟ್‌ ಶ್ನೈಡರ್‌,ಕೆಥೋಲಿಕ್‌ ಸಭೆ ಮಂಗಳೂರು ಪ್ರದೇಶ್‌ನ ಮಾಜಿ ಅಧ್ಯಕ್ಷ ಎಲ್‌.ಜೆ ಫೆರ್ನಾಂಡಿಸ್‌, ಪಾಂಬೂರು ಚರ್ಚ್‌ನ ಧರ್ಮಗುರು ರೆ|ಫಾ| ಹೆನ್ರಿ ಮಸ್ಕರೇನಸ್‌,ಮಾನಸ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ|ಎಡ್ವರ್ಡ್‌ ಲೋಬೋ,ಮಾಜಿ ಅಧ್ಯಕ್ಷೆ ರೆಮೇಡಿಯಾ ಡಿಸೋಜಾ, ಕೆಥೋಲಿಕ್‌ ಸಭೆ ಮಂಗಳೂರು ಪ್ರದೇಶ್‌ನ ಅಧ್ಯಕ್ಷ ಸ್ಟಾನಿ ಲೋಬೋ, ಕೆಥೋಲಿಕ್‌ ಸಭೆ ಉಡುಪಿ ಪ್ರದೇಶ್‌ನ ಅಧ್ಯಕ್ಷೆ ಮೇರಿ ಡಿಸೋಜಾ, ಮಾನಸ ಸಂಸ್ಥೆಯ ಕೋಶಾಧಿಕಾರಿ ವಲೇರಿಯನ್‌ ಫೆರ್ನಾಂಡಿಸ್‌, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವನಿತಾ ಶೆಟ್ಟಿಗಾರ್‌ ವೇದಿಕೆಯಲ್ಲಿದ್ದರು. ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮೆನೇಜಸ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಸಿ| ಅನ್ಸಿಲ್ಲಾ ಫೆರ್ನಾಂಡಿಸ್‌ ವರದಿ ವಾಚಿಸಿದರು.

ಮಾನಸ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಕೆಥೋಲಿಕ್‌ಸಭೆ ಉಡುಪಿ, ಮಂಗಳೂರ್‌ನ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕ ವೃಂದ, ಹೆತ್ತವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಜತ ಮಹೋತ್ಸವ ಸಮಿತಿಯ ಸಂಚಾಲಕ ಎಲ್ರಾಯ್‌ ಕಿರಣ್‌ ಕ್ರಾಸ್ತಾ ಸ್ವಾಗತಿಸಿದರು. ಶಿಕ್ಷಕಿಯರಾದ ರೀನಾ ಡಿಸೋಜಾ, ಪ್ರಭಾ ಮತ್ತು ಶಶಿಕಲಾ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯದರ್ಶಿ ಜೋಸೆಫ್‌ ನೊರೊನ್ಹಾ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next