Advertisement

ತಂದೆಯನ್ನೇ ಬೀದಿಗೆ ತಳ್ಳಿದ ಮಕ್ಕಳು: ಹೈಕೋರ್ಟ್‌ ಕೆಂಡಾಮಂಡಲ

06:10 AM Nov 10, 2018 | |

ಬೆಂಗಳೂರು: ಆಸ್ತಿಯನ್ನು ಕಬಳಿಸಿ ವೃದ್ಧ ತಂದೆಯನ್ನು ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳ ಮೇಲೆ ಕೆಂಡ ಕಾರಿದ ಹೈಕೋರ್ಟ್‌, ಹುಟ್ಟಿಸಿದ ಮಕ್ಕಳಿಂದಲೇ ಕಿರುಕುಳ ಅನುಭವಿಸುತ್ತಿರುವ ತಂದೆಯ ಅಸಹಾಯಕತೆಯ ಬಗ್ಗೆ ಮರುಕಪಟ್ಟಿತು.

Advertisement

ತನ್ನ ಮಕ್ಕಳಿಂದ ನ್ಯಾಯ ಕೊಡಿಸಬೇಕು ಮತ್ತು ರಕ್ಷಣೆ ಒದಗಿಸಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಸಿ.ಎ ಕೆರೆ ಹೋಬಳಿ ಅಣ್ಣೂರು ಗ್ರಾಮದ 71 ವರ್ಷ ವೃದ್ಧ ಪಟೇಲ್‌ ಶಿವಲಿಂಗೇಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ. ವೀರಪ್ಪ, ತಂದೆಯನ್ನು ಬೀದಿಗೆ ತಳ್ಳಿದ ಮಕ್ಕಳ ವಿರುದ್ಧ ಕೆಂಡಾಮಂಡಲವಾದರು, ಉಪವಿಭಾಗಾಧಿಕಾರಿ ಆದೇಶ ಪಾಲಿಸಿದ ಪೊಲೀಸರ ಮೇಲೆ ಕಿಡಿ ಕಾರಿದರು.  ಪ್ರತಿವಾದಿಗಳ ಪರ ವಕೀರನ್ನು ತೀವ್ರ ತರಾಟೆಗೆ ತೆಗೆದುಕೊಂಡು. ಅಂತೆಯೇ ವೃದ್ಧ ತಂದೆಯ ಅಸಹಾಯಕತೆನ್ನು ಕಂಡು ಮರುಕಪಟ್ಟರು.

ಇದೇ ವೇಳೆ ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಶಿವಲಿಂಗೇಗೌಡರು ತಮ್ಮ ಸ್ವಯಾರ್ಜಿಯ ಆಸ್ತಿಯನ್ನು ಅನುಭವವಿಸಲು ಮತ್ತು ಮಕ್ಕಳು ಅವರನ್ನು ಪಾಲನೆ, ಪೋಷಣೆ ಮಾಡುವ ಬಗ್ಗೆ ಮಂಡ್ಯ ಉಪವಿಭಾಗಾಧಿಕಾರಿಗಳು 2017ರ ನ.14ರಂದು ನೀಡಿದ್ದ ಆದೇಶ ಪಾಲನೆ ಮಾಡಿ, ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ್ಯವಹಿಸಿದ ಕೆ.ಎಂ. ದೊಡ್ಡಿ ಪೊಲೀಸ್‌ ಠಾಣೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿ ವಿಚಾರಣೆಯನ್ನು ನ.19ಕ್ಕೆ ಮುಂದೂಡಿದರು.

ಇದೊಂದು ದುರಾದೃಷ್ಟಕರ ಹಾಗೂ ಅಪರೂಪದ ಪ್ರಕರಣ. ಸನ್ನಿವೇಶ ಗಮನಿಸಿದರೆ ಮನಸ್ಸಿಗೆ ಬಹಳ ನೋವು ಆಗುತ್ತದೆ. ತಂದೆ ಇದ್ದಿದ್ದರಿಂದಲೇ ಈ ಮಕ್ಕಳು ಬಂದಿದ್ದಾರೆ. ಆದರೆ ಹುಟ್ಟಿಸಿದ ಮಕ್ಕಳ ದುಂಡಾವರ್ತನೆಯಿಂದ ಇಂದು ಒಬ್ಬ ವೃದ್ಧ ತಂದೆ ಅಸಹಾಯಕನಾಗಿ ನ್ಯಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದಾನೆ. ಈ ಮಕ್ಕಳು ಕೊಟ್ಟ ಕಷ್ಟಕ್ಕೆ ತಾಯಿ ಪ್ರಾಣ ಕಳೆದುಕೊಂಡಿದ್ದಾಳೆ. ಕರುಣೆ, ದಯೆ, ಮನುಷ್ಯತ್ವ ಇಲ್ಲದ ಇವರನ್ನು ಮಕ್ಕಳೆಂದು ಹೇಳಬೇಕಾ? ಛೆ…ಹೆತ್ತ ತಾಯಿಯನ್ನು ಕೊಂದ, ವೃದ್ಧ ತಂದೆಯನ್ನು ಬೀದಿಗೆ ತಳ್ಳಿರುವ ಇವರು ಮಕ್ಕಳಲ್ಲ, ಗೂಂಡಾಗಳು. ಈ ನಿರ್ದಯಿ ಮಕ್ಕಳು ಕೇಂದ್ರ ಸರ್ಕಾರದ “ಪೋಷಕರ ಮತ್ತು ಹಿರಿಯ ನಾಗರೀಕರ ಪೋಷಣೆ ಹಾಗೂ ಸಂರಕ್ಷಣೆ ಕಾಯ್ದೆಯನ್ನು’ ಸ್ಪಷ್ಟವಾಗಿ ಉಲ್ಲಂ ಸಿದ್ದಾರೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖೀಸಿದರು.

ವಕೀಲರಿಗೆ ತರಾಟೆ: ವಿಚಾರಣೆ ವೇಳೆ ಉಪವಿಭಾಗಾಧಿಕಾರಿ  ಆದೇಶ ಪ್ರಶ್ನಿಸಿದೇ  ಹೈಕೋರ್ಟ್‌ಗೆ ನೇರವಾಗಿ ಆಕ್ಷೇಪಣೆ ಸಲ್ಲಿಸಿದ ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು”ಪ್ರಕರಣದಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲು ಮತ್ತು ಅರ್ಜಿದಾರರ ಪರ ಮೃದು ಧೋರಣೆ ತಾಳಿದ ವಕೀಲರನ್ನು ಉದ್ದೇಶಿಸಿ “ಮಿಸ್ಟರ್‌ ಅಡ್ವೋಕೇಟ್‌ ನಿವೊಬ್ಬ ಕೋರ್ಟ್‌ ಆಫೀಸರ್‌, ನ್ಯಾಯಪೀಠದಲ್ಲಿ ಹಾಜರಿದ್ದೀರಿ ಅನ್ನುವುದು ನೆನಪಿರಲಿ. ಸಹಾಯಕ ಆಯುಕ್ತರ ಆದೇಶ ಚಾಲೆಂಜ್‌ ಮಾಡದೇ ನೇರವಾಗಿ ಹೈಕೋರ್ಟ್‌ಗೆ ಅಬೆjಕ್ಷನ್‌ ಸಲ್ಲಿಸಿದ್ದೀರಿ. ನ್ಯಾಯಕ್ಕೆ ಗೌರವ ಕೊಡದ, ತಂದೆಯನ್ನು ಕಂಗಾಲು ಮಾಡಿರುವ ಗೂಂಡಾ ಮಕ್ಕಳ ಪರ ವಕಾಲತ್ತು ವಹಿಸಿತ್ತಿದ್ದೀರಾ, ನೀವು ನ್ಯಾಯದ ಪರ ಇರಬೇಕು, ನ್ಯಾಯಾಂಗದ ಘನತೆ, ಗೌರವ ಎತ್ತಿ ಹಿಡಿಯಬೇಕು. ಅದು ಬಿಟ್ಟು ಬೇರೆಯೇ ಮಾಡುತ್ತಿದ್ದೀರಿ. ನಿಮ್ಮ ಈ ನಡವಳಿಕೆಯನ್ನು ಬಾರ್‌ ಕೌನ್ಸಿಲ್‌ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಇದೇ ವೇಳೆ ಉಪವಿಭಾಗಾಧಿಕಾರಿಗಳ ಆದೇಶದ ಮೇಲೆ ಕ್ರಮ ಕೈಗೊಂಡ ಪೊಲೀಸ್‌ ಮಹಜರು ಎಲ್ಲಿ ಎಂದು ನ್ಯಾಯಮೂರ್ತಿಗಳು ಕೇಳಿದರು. ಇದಕ್ಕೆ ಉತ್ತರಿಸದಿದ್ದಾಗ, ನ್ಯಾಯಾಲಯದಲ್ಲಿ ಹಾಜರಿದ್ದ ಕೆ.ಎಂ. ದೊಡ್ಡಿ ಎಎಸ್‌ಐ  ಮೇಲೆ ಕೆಂಡ ಕಾರಿದ ನ್ಯಾಯಮೂರ್ತಿಗಳು “ಏನ್ರಿ ಒಳ್ಳೆ ಕಪಿ ತರಹ ನಿಂತಿದ್ದೀರಲ್ಲಾ, ಇಷ್ಟು ದಿನ ಏನ್‌ ಮಾಡಿದ್ರಿ, ಎಲ್ಲಿ ಮಹಜರು ಕಾಪಿ, ಕಾನೂನು ರಕ್ಷಣೆ ಮಾಡುವುದು ಗೊತ್ತಿಲ್ವ ನಿಮಗೆ, ಬರೀ ಬಡವರನ್ನು ಸುಲಿಗೆ ಮಾಡುವುದಷ್ಟೇ ನಿಮಗೆ ಗೊತ್ತಾ,  ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೈಲಿಗೆ ಕರೆದೊಯ್ಯಲು ಪೊಲೀಸರಿಗೆ ಸೂಚನೆ
ವಾದ-ಪ್ರತಿ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿಗಳು ತೀರ್ಪು ಬರೆಸುತ್ತಿದ್ದರು. ಈ ವೇಳೆ ಶಿವಲಿಂಗೇಗೌಡರ ಹಿರಿಯ ಮಗ ರಾಮಕೃಷ್ಣ, “ಸ್ವಾಮಿ ನಮೂª ಸ್ವಲ್ಪ ಕೇಳಿ, ನಾವೂ ಹೇಳ್ತೀವಿ’ ಎಂದು ಏರಿದ ಧ್ವನಿಯಲ್ಲಿ ಕೇಳಿದ. ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು ಕೋರ್ಟ್‌ ಕಲಾಪಕ್ಕೆ ಅಡ್ಡಿಪಡಿಸಿದ, ನ್ಯಾಯಾಲಯಕ್ಕೆ ಅಗೌರವ ತೋರಿದ ಕಾರಣಕ್ಕೆ ಆತನನ್ನು ಬಂಧಿಸಿ ಜೈಲಿಗೆ ಕರೆದುಕೊಂಡು ಹೋಗುವಂತೆ ಕೋರ್ಟ್‌ನಲ್ಲಿದ್ದ ಪೊಲೀಸರಿಗೆ ಸೂಚನೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಅರ್ಜಿದಾರರ ಪರ ವಕೀಲರು “ಸ್ವಾಮಿ ಕರುಣೆ ತೋರಿ, ನಾನು ಅವರಿಗೆ ಬುದ್ಧಿವಾದ ಹೇಳುತ್ತೇನೆ’ ಎಂದು ಮನವಿ ಮಾಡಿದರು. “ಏನ್‌ ಬುದ್ದಿವಾದ ಹೇಳ್ತೀರಿ ಇಂತಹವರಿಗೆ, ನಿಮಗೆ ತಂದೆ-ತಾಯಿ ಇಲ್ವಾ, ಈ ವಿಚಾರವನ್ನು ಹೆಚ್ಚಿಗೆ ಬೆಳಸಬೇಡಿ, ಇಲ್ಲದಿದ್ದರೆ ನಿಮ್ಮ ಪ್ರಕರಣವನ್ನು ಬಾರ್‌ ಕೌನ್ಸಿಲ್‌ಗೆ ವರ್ಗಾಯಿಸಬೇಕಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದರು. ಇದೇ ವೇಳೆ ಕೋರ್ಟ್‌ನಲ್ಲಿ ಉದ್ಧಟತನ ತೋರಿದ ರಾಮಕೃಷ್ಣ ವರ್ತನೆಗೆ “ರೌಡಿಸಂ ಮಾಡಲು ಇದು ಮಂಡ್ಯ ಅಲ್ಲ, ಹೈಕೋರ್ಟ್‌’ ಎಂದು ಕಟು ಮಾತಿನಲ್ಲಿ ಹೇಳಿದರು.

ಏನಿದು ಪ್ರಕರಣ: ಇಬ್ಬರು ಮಕ್ಕಳಾದ ಎಸ್‌. ರಾಮಕೃಷ್ಣ ಹಾಗೂ ಎಸ್‌. ಬೋರೇಗೌಡ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಕಬಳಿಸಿ ನನಗೆ ಬೀದಿಗೆ ತಳ್ಳಿದ್ದಾರೆ. ಇವರು ಕೊಟ್ಟ ಕಷ್ಟಕ್ಕೆ ಪತ್ನಿ ಕಮಲಮ್ಮ ಅನ್ನ, ನೀರು ಇಲ್ಲದೆ ಪ್ರಾಣ ಬಿಟ್ಟಳು. ಈಗ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಮಕ್ಕಳು ಮತ್ತು ಸೊಸೆಯಂದಿರರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ. ಆಸ್ತಿ ಬರೆದುಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸದ್ಯ ನನಗೆ ತಲೆ ಮೇಲೆ ಸೂರಿಲ್ಲ, ಉಡಲು ಬಟ್ಟೆ ಇಲ್ಲ, ತಿನ್ನಲು ಅನ್ನವಿಲ್ಲ ಎಂದು ಶಿವಲಿಂಗೇಗೌಡರು ಉಪವಿಭಾಗಾಧಿಕಾರಿಗಳಿದೆ ದೂರು ಕೊಟ್ಟಿದ್ದರು. ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು “ಶಿವಲಿಂಗೇಗೌಡರ ಶಾಂತಿಯುತ ಜೀವನಕ್ಕೆ ಭಂಗ ಬಾರದಂತೆ ಮಕ್ಕಳು ಹಾಗೂ ಸೊಸೆಯಿಂದಿರು ಪೋಷಣೆ, ರಕ್ಷಣೆ ಮಾಡಬೇಕು. ಶಿವಲಿಂಗೇಗೌಡರು ತಮ್ಮ ಸ್ವಯಾರ್ಜಿತ ಆಸ್ತಿ ನುಭವಿಸಲು ಸ್ವತಂತ್ರರು, ಅವರ ಜೀವಿತಾವಧಿಯಲ್ಲಿ ಯಾರೂ ಈ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಉಪವಿಭಾಗಾಧಿಕಾರಿ 2017ರ ನ.14ರಂದು ಆದೇಶ ಹೊರಡಿಸಿದ್ದರು. ಅದು ಪಾಲನೆಯಾಗದ ಹಿನ್ನೆಲೆಯಲ್ಲಿ ಶಿವಲಿಂಗೇಗೌಡ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next