Advertisement

ನಿಸರ್ಗದ ಆಟಗಳಿಂದ ವಂಚಿತರಾದ ಮಕ್ಕಳು

02:23 PM Jul 28, 2019 | Suhan S |

ಮಂಡ್ಯ: ಆಧುನೀಕತೆಯ ಇಂದಿನ ದಿನಗಳಲ್ಲಿ ಪ್ರಕೃತಿ ದತ್ತವಾದ ಮಣ್ಣು, ನೀರು, ಗಿಡ-ಮರಗಳ ಜೊತೆ ಮಕ್ಕಳನ್ನು ಆಟವಾಡಲು ಬಿಡದೆ ದೈಹಿಕ ಸದೃಢತೆ ಯಿಂದ ವಂಚಿತರನ್ನಾಗಿ ಮಾಡುತ್ತಿದ್ದೇವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್‌ ಹೇಳಿದರು.

Advertisement

ಭಾರತ ಸೇವಾದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಹಾಗೂ ಸೇಂಟ್ ಜಾನ್‌ ಆ್ಯಂಬುಲೆನ್ಸ್‌ ವತಿಯಿಂದ ನಗದರ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಬಾಲ್ಯದ ಸಮಯವನ್ನು ನಾವು ಮಣ್ಣಿನೊಂದಿಗೆ ಆಟವಾಡುತ್ತಾ ಕಳೆದಿದ್ದೇವೆ. ನೀರಿನಲ್ಲಿ ಈಜುವುದು, ಮರಗಳನ್ನು ಹತ್ತಿ ಹತ್ತಿ ಹಣ್ಣು, ಕಾಯಿಗಳನ್ನು ಕಿತ್ತು ತಿನ್ನುವುದು, ಕಣ್ಣಾಮುಚ್ಚಾಲೆಯಾಟ ಸೇರಿದಂತೆ ನಿಸರ್ಗದೊಂದಿಗೆ ಬೆರೆತು ಆಟವಾಡುವ ಮೂಲಕ ಬಾಲ್ಯವನ್ನು ಆನಂದದಿಂದ ಕಳೆದಿದ್ದೇವೆ. ಆದರೆ, ಈಗಿನ ಮಕ್ಕಳನ್ನು ಅತ್ಯಂತ ನಿಸರ್ಗದಿಂದ ಸಂಪೂರ್ಣ ದೂರ ಉಳಿಸಿ ಸೂಕ್ಷ್ಮವಾಗಿ ಬೆಳೆಸುತ್ತಿದ್ದೇವೆ. ಇದರಿಂದ ಅವರ ದೈಹಿಕ ಶಕ್ತಿಯ ಮಟ್ಟವನ್ನು ಕುಂದಿಸಿದ್ದೇವೆ ಎಂದು ಬೇಸರಗೊಂಡರು.

ವೈವಿಧ್ಯಮಯ ಗಾಳಿಪಟಗಳು: ಸ್ಪರ್ಧೆಯಲ್ಲಿ 1ರಿಂದ 7ನೇ ತರಗತಿ ಮಕ್ಕಳಿಗೆ ಕಿರಿಯ ವಿಭಾಗ, 8ರಿಂದ ಪಿಯು ಹಂತದ ವಿದ್ಯಾರ್ಥಿಗಳು ಹಿರಿಯ ವಿಭಾಗ ಹಾಗೂ ಮುಕ್ತವಿಭಾಗದಲ್ಲಿ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಸಾಮಾಜಿಕ ಕಾಳಜಿ ಹೊಂದಿರುವ ಹೆಣ್ಣು ಭ್ರೂಣ ಹತ್ಯೆ ತಡೆಯುವುದು, ನೀರಿನ ಸಂರಕ್ಷಣೆ, ಕನ್ನಡ ನಾಡಿನ ಧ್ವಜದ ಬಣ್ಣದ ಪಟಗಳು, ದೇವರ ಭಾವಚಿತ್ರಗಳಾದ ಶಿವಲಿಂಗ, ನಾಗಲಿಂಗ, ಗಣೇಶ, ಚಲನಚಿತ್ರದ ಹೆಸರನ್ನು ಸೂಚಿಸುವ ಕದಂಬ, ಕುರುಕ್ಷೇತ್ರ, ರಿಯಲ್ ಆರ್ಟ್‌ ಹಾಗೂ ಮಕ್ಕಳು ಗೊಂಬೆಗಳ ಚಿತ್ರ ಸೂಚಿಸುವ ಪಟಗಳನ್ನು ಹಾರಿಸಿ ಖುಷಿಯಿಂದ ಸ್ಪರ್ಧಿಸಿದರು.

ಬಹುಮಾನ ವಿಜೇತರು: ಮುಕ್ತ ವಿಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆ ಜಾಗೃತಿ ಮೂಡಿಸುವ ಪಟ ಮೊದಲ ಬಹುಮಾನ ಗಳಿಸಿದ್ದು, ಎಸ್‌.ಡಿ.ಜಯರಾಂ ಪ್ರಶಸ್ತಿ ಮತ್ತು ಪಾರಿತೋಷಕ ನೀಡಲಾಯಿತು. ಎರಡನೇ ಸ್ಥಾನ ಪಡೆದ ತಟ್ಟೆ ಪಟಕ್ಕೆ ಡಾ.ಕೆ.ಎಸ್‌. ನಾರಾಯಣ ಸ್ವಾಮಿ ಹಾಗೂ ಸಿಂಹ ಲಾಂಛನದ ಮೂರನೇ ಸ್ಥಾನ ಪಡೆದ ಪಟಕ್ಕೆ ಡಾ.ವೈ.ಎಸ್‌.ರಾಮರಾವ್‌ ಪ್ರಶಸ್ತಿ ಮತ್ತು ಪಾರಿತೋಷಕ ನೀಡಲಾಯಿತು.

Advertisement

ಕಿರಿಯ ವಿಭಾಗದಲ್ಲಿ ಯೋಗೇಶ್‌, ಜೋಸೆಫ್, ಕಾತ್ಯಾಯಿನಿ, ಮಹೇಶ್‌, ದೇವರಾಜು ಹಾಗೂ ಹಿರಿಯ ವಿಭಾಗದಲ್ಲಿ ಯಶವಂತ್‌, ಸಿದ್ದರಾಜು ನಾಯಕ, ಕಿರಣ್ತೇಜ್‌, ಆತ್ಮಾನಂದ ಮತ್ತು ಗುರುಪ್ರಸಾದ್‌ ಕ್ರಮವಾಗಿ ಒಂದರಿಂದ ಐದನೇ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಪಾರಿತೋಷಕ ನೀಡಿದರೆ, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.

ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ಶಿವಾನಂದ, ಸದಸ್ಯ ಟಿ.ಕೆ.ಸಿದ್ದಲಿಂಗು, ನಾಗ ರಾಜ್‌, ನೀನಾ ಪಟೇಲ್, ಉಷಾರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next