Advertisement

ಮಕ್ಕಳಿಗೆ ಶಿಕ್ಷಣ ಹೊರೆಯಾಗಿದೆ

11:40 AM Nov 24, 2018 | Team Udayavani |

ಬೆಂಗಳೂರು: ಪೋಷಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು. ನ್ಯಾಷನಲ್‌ ಹಿಲ್‌ ವಿವ್‌ ಪಬ್ಲಿಕ್‌ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಹಿತ್ಯ ವಾರ ಕಾರ್ಯಕ್ರಮದಲ್ಲಿ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಂದು ಮಕ್ಕಳು ಶಿಕ್ಷಣವನ್ನು ಖುಷಿಯಿಂದ ಅನುಭವಿಸುತ್ತಿದ್ದರು. ಆದರೆ ಇಂದಿನ ಮಕ್ಕಳಿಗೆ ಶಿಕ್ಷಣ ಎಂಬುದು ಹೊರೆಯಾಗಿದೆ.

Advertisement

ಮನೆಪಾಠ ಅಥವಾ ಅಂಕ ಗಳಿಸಬೇಕೆಂಬ ಧಾವಂತ ಅಂದಿನ ಮಕ್ಕಳಲ್ಲಿ ಇರಲಿಲ್ಲ. ಆದರೆ ಇಂದು ಶಾಲೆಯಲ್ಲೂ ಓದು, ಮನೆಯಲ್ಲೂ ಓದು, ಎಲ್ಲಿದ್ದರೂ ಓದು ಅಂಕ ಗಳಿಸು ಎನ್ನುವವರೆ ಹೆಚ್ಚಾಗಿದ್ದಾರೆ. ಮಕ್ಕಳು ನಮ್ಮ ನಿಮ್ಮಂತೆಯೇ ಮನುಷ್ಯರು. ಅವರಲ್ಲಿ ಪೋಷಕರ ಆಸೆಗಳನ್ನು ಹೇರಬಾರದು. ಮಕ್ಕಳು ಸಹಜವಾಗಿ ಬಾಲ್ಯ ಕಳೆಯುವಂತ ವಾತಾವರಣ ನಿರ್ಮಿಸಬೇಕು ಎಂದರು.

ಇಂದಿನ ಮಕ್ಕಳು ವಿಡಿಯೋ ಗೇಮ್‌, ಮೊಬೈಲ್‌ ಮತ್ತು ಕಂಪ್ಯೂಟರ್‌ ಗೇಮ್‌ಗಳಿಂದ ಹೊರಬಂದು ದೈಹಿಕ ಶ್ರಮ ನೀಡುವ ಆಟಗಳನ್ನು ಆಡಬೇಕು. ಇದರಿಂದ ಉತ್ತಮ ಆರೋಗ್ಯ ಲಭಿಸಲಿದೆ. ಅಲ್ಲದೆ ಜನರೊಂದಿಗೆ ಬೆರೆಯುವುದರಿಂದ ಮಕ್ಕಳ ಮನೋವಿಕಾಸವಾಗಲಿದೆ. ಕೇವಲ ಎಲೆಕ್ಟ್ರಾನಿಕ್‌ ಗೆಜೆಟ್‌ಗಳಲ್ಲಿ ಮಕ್ಕಳು ಕಳೆದು ಹೋದರೆ ಅವರ ಮನೋವಿಕಾಸ ಎಲೆಕ್ಟ್ರಾನಿಕ್‌ ವಸ್ತುಗಳಾಂತೆ ಆಗಲಿದೆ ಎಂದು ಹೇಳಿದರು.

ನಾವೆಲ್ಲ ಬಾಲ್ಯದಲ್ಲಿದ್ದಾಗ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಇರಲಿಲ್ಲ. ಆರ್ಥಿಕ ದುರ್ಬಲತೆ, ಮನೆ ತುಂಬಾ ಮಕ್ಕಳು ಹಾಗೂ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಕಡಿಮೆ ಇತ್ತು. ಆದರೆ ಇವತ್ತಿನ ಮಕ್ಕಳಿಗೆ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಂದಾಗಿ ಎಲ್ಲದರ ಮಾಹಿತಿ ಸುಲಭದಲ್ಲಿ ದೊರೆಯುತ್ತಿದೆ. ಮನೆಗೆ ಒಂದೇ ಮಗು ಇರುವುದರಿಂದ ಪೋಷಕರ ಗಮನವೆಲ್ಲಾ ಆ ಮಗುವಿನ ಮೇಲೆ ಇರುತ್ತದೆ.

ಇಂದು ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚಾಗಿದೆ. ಈ ಮಧ್ಯೆ ತಂದೆ ತಾಯಿ ಮಕ್ಕಳ ಮೇಲೆ ಅಂಕ ಗಳಿಸುವ ಒತ್ತಡ ಹೇರುತ್ತಿದ್ದಾರೆ. ಹಿಂದೆ ಪೋಷಕರು ಮಕ್ಕಳ ಮೇಲೆ ಅಂಕ ಗಳಿಸುವ ಒತ್ತಡ ಹೇರುತ್ತಿರಲಿಲ್ಲ. ಹೀಗಾಗಿ ನಮ್ಮ ಕಾಲದ ಮಕ್ಕಳ ಬಾಲ್ಯ ಬಹಳ ಚೆನ್ನಾಗಿತ್ತು ಎಂದರು.

Advertisement

ನನಗೆ ನಾನೇ ಮಾದರಿ ವ್ಯಕ್ತಿಯಾಗಬೇಕೆಂದು ಬಾಲ್ಯದಿಂದ ಬೆಳೆಸಿಕೊಂಡು ಬಂದಂತಹ ಗುಣ ಇವತ್ತು ನಾನು ಮಾದರಿ ವ್ಯಕ್ತಿಯಾಗಿರಲು ಕಾರಣವಾಗಿದೆ. ಪುಸ್ತಕಗಳನ್ನು ಬರೆಯಬೇಕೆಂದರೆ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕು. ಭೈರಪ್ಪನವರ ಧರ್ಮಶ್ರೀ ಹಾಗೂ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಗಳು ನನಗೆ ಲೇಖಕಿಯಾಗಲು ಪ್ರೇರಣೆ ನೀಡಿದವು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸುಧಾಮೂರ್ತಿ ಬರೆದಿರುವ ದಿ ಅಪ್‌ಸೆçಡ್‌ -ಡೌನ್‌ ಕಿಂಗ್‌ ಕೃತಿಯಲ್ಲಿನ ಪಾಂಚಜನ್ಯ ಕಥೆಯನ್ನು 11ನೇ ತರಗತಿಯ ಈಶಿತಾ ಅಗರ್‌ವಾಲ್‌ ಹಾಗೂ 10ನೇ ತರಗತಿಯ ದುರ್ಗಾ ರಾಜೀವ್‌ ಬರೋಲಿ ಓದಿದರು. ಕಾರ್ಯಕ್ರಮದಲ್ಲಿ ನ್ಯಾಷನಲ್‌ ಎಜುಕೇಷನಲ್‌ ಪ್ರತಿಷ್ಠಾನದ ಹೆಚ್ಚುವರಿ ಕಾರ್ಯದರ್ಶಿ ವೆಂಕಟಪ್ಪ, ಪ್ರಾಂಶುಪಾಲೆ ಅನಿತಾ ವಿನೋದ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next