ಈ ಯೌವನಕ್ಕಿಂತ ಆ ಬಾಲ್ಯವೇ ಸೊಗಸಾಗಿತ್ತು. ನಗುವಿಗೆ ಬಿಡುವಿರದ, ಸಮಯದ ಅರಿವಿಲ್ಲದ, ಚೆಲ್ಲಾಟದ ಆ ಮುಗ್ಧತೆ ಗೆಲುವಾಗಿತ್ತು.
“ನಾನು ತೀರಾ ಸುಖಿ’ ಎನ್ನುವ ಹೊತ್ತಲ್ಲಿ ಬಾಲ್ಯದ ನೆನಪುಗಳು ಜ್ಞಾಪಕವಾಗುತ್ತವೆ. ದುಃಖ, ನೋವು, ಅಸಹಾಯಕತೆ ಮನದೊಳಗೆ ನಿಂತಾಗಲೆಲ್ಲ ಒಂದಷ್ಟು ನೆಮ್ಮದಿ ಕೊಡುವುದು ಈ ಬಾಲ್ಯದ ಒಡನಾಟಗಳ ಸವಿನೆನಪು.
ಆಗ ಸವಿದ ನಿಷ್ಕಲ್ಮಶ ಪ್ರೀತಿ ಮರುಕಳಿಸುತ್ತಿದೆ, ಬದುಕಿನ ಜಂಜಾಟಗಳನ್ನೆಲ್ಲ ಮರೆತೇ ಬಿಟ್ಟೆನೆಂಬಂತೆ, ಆ ನೆನಪುಗಳ ಬಂಡಿಯನ್ನೇರಿ ಬಾಲ್ಯದ ಜಗತ್ತಿನತ್ತ ತೆರಳಿದರೆ ಖುಷಿಯೋ ಖುಷಿ. ಆ ಜಗತ್ತು ಅದೆಷ್ಟು ಸುಂದರವಾದದ್ದು.
ಕಳೆದ ಸಮಯ ಮತ್ತೆ ಬಾರದು ಎಂಬ ಅರಿವಿದ್ದರೂ ಕಲ್ಪನೆಯ ಹಾದಿಯಲ್ಲಿ ತಂಟೆ-ತರಲೆಗಳು ಸಡಗರ ಸುಮಧುರ, ಮರೆತರೂ ಮರೆಯದೆ ಕಾಡುವ ನೆನಪುಗಳೇ ಮಧುರವಾಗಿವೆ. ಒಂಟಿಯಾಗಿದ್ದಾಗ ಅವು ಸುಳಿ ಸುಳಿದು ಕಾಡುತ್ತಿವೆ. ಕಳೆದ ಗಳಿಗೆಗಳು ಹಸಿರಾಗಿವೆ. ಅದಕ್ಕೇ ಇರಬೇಕು, ಕತೆ, ಕಾದಂಬರಿ, ಪ್ರಬಂಧಗಳಲ್ಲಿ ಹೆಚ್ಚು ಪ್ರಸ್ತಾಪವಾಗುವುದು ಬಾಲ್ಯವಿಚಾರವೇ. ಅವು ಓದುವುದಕ್ಕೂ ಬಹಳ ಚೆನ್ನ.
ದಿವ್ಯಾ
ದ್ವಿತೀಯ ಬಿಎ (ಪತ್ರಿಕೋದ್ಯಮ)ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು