ಅದೊಂದು ದಿನ ನಮ್ಮ ಮನೆಗೆ ಹೊಸ ಗಾಡಿ ಬಂತು. ಹೊಸದಂದ್ರೆ ಶೋ ರೂಂ ನಿಂದ ನೇರವಾಗಿ ತಂದಿದ್ದು ಅಲ್ಲ. ಸೆಕೆಂಡ್ ಹ್ಯಾಂಡ್‌ಗೆ ಎಷ್ಟೋ ನೂರು ರೂ.ಗಳು ಕೊಟ್ಟು ತೆಗದುಕೊಂಡು ಬಂದಿದ್ದು.
ಈಗಿನ ರಾಯಲ್ ಎನ್‌ಫೀಲ್ಡ್ ತರ. ಆಗ ಆ ಸೈಕಲ್‌ಗಳದ್ದೇ ಒಂದು ಜಮಾನ. ಎತ್ತರವಾಗಿ ಕಾಲು ನಿಲುಕಾದಾಗಿತ್ತು ಆ ಸೈಕಲ್. ಅದರ ಹೆಸರು ಅಟ್ಲಾಸ್…
ಮನೇಲಿ ನಾವು ನೋಡ್ತಿರೋ ಮೊದಲ ಗಾಡಿಯೇ ಇದಾಗಿತ್ತು. ನಾನು ಮತ್ತು ನನ್ನ ತಂಗಿ ಆ ಸೈಕಲ್ ಆಗಮನವನ್ನು ಕಂಡು ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದ್ವಿ. ಸ್ನೇಹಿತರಿಗೆ, ಅಪ್ಪ ಸೈಕಲ್ ತಂದ ಸುದ್ದಿಯನ್ನು ಕೇರಿಯ ಎಲ್ಲ ಜನರಿಗೆ ಹೇಳಿ ಬಂದಿದ್ದೆವು.
ನಮ್ಮ ಹೈಸ್ಕೂಲ್ ಮನೆಯಿಂದ ನೂರು ಮೀ. ದೂರದಲ್ಲೇ ಇತ್ತು. ರೋಡ್‌ನ ದಾರಿಯನ್ನು ಹಿಡಿದು ಹೊರಟರೇ ಮಾತ್ರ ಸುಮಾರು ಅರ್ಧ ಕಿ. ಮೀ. ಆಗುತ್ತಿತ್ತು. ಅದಕ್ಕೆ ನಾವು ನಡ್ಕೊಂಡು ಹೋಗುವ ಬದಲು ಅಪ್ಪನಿಗೆ ಅಟ್ಲಾಸ್ ಸೈಕಲ್‌ನಲ್ಲಿ ಬಿಟ್ಟು ಬರಲು ಹೇಳ್ತಾಯಿದ್ವಿ. ಇಲ್ಲಂದ್ರೆ ಹಠ ಮಾಡ್ತಾಯಿದ್ವಿ. ಇಲ್ಲೇ ಸಮೀಪದಲ್ಲಿ ಸ್ಕೂಲ್ ಇದೆಯಲ್ಲ ಹೋಗಿ ಅಂದ್ರೆ ನಾವು ಕೇಳ್ತಾಯಿರಲಿಲ್ಲ. ಕೊನೆಗೆ ಅಪ್ಪನ ಅಂಬಾರಿಯಲ್ಲಿ ನಮ್ಮನ್ನು ಕೂರಿಸಿಕೊಂಡು ರಾಜ ಮೆರವಣಿಗೆ ಹೊರಡ್ತಾಯಿದ್ರು. ಶಾಲೆಗೆ ಆ ಅಟ್ಲಾಸ್ ಅಂಬಾರಿ ಮೇಲೆ ಹೋದ್ರೆ ನಮಗೆ ರಾಜ ಮರ್ಯಾದೆ.
ಅಪ್ಪನೂ ತಾವು ಹೊಲಕ್ಕೆ, ಪೇಟೆಗೆ ಹೋಗಬೇಕಾದ್ರೆ ಇದೇ ಅಟ್ಲಾಸ್ ಸೈಕಲ್‌ನ್ನೇ ಆಶ್ರಯಿಸುತ್ತಿದ್ದರು. ಪ್ರತಿ ಅಮಾವಾಸ್ಯೆ ರಾತ್ರಿ ನನ್ನ ಸಣರ್ಮಿ ಮುತ್ಯಾನ (ಗುಡ್ಡದಲ್ಲಿ ಇರೋ ಸಂತರ ಗುಡಿ) ಹತ್ರ ಕರ್ಕೊಂಡ್ ಹೋಗ್ತಾ ಇದ್ದುದ್ದು ನನ್ನ ಕಣ್ಣಲ್ಲಿ ಕಟ್ಟಿದಂತೆಯಿದೆ.
ಹೀಗೆ ದಿನ ಕಳೆದಂತೆ ಅಪ್ಪ ಬೈಕ್ ತೆಗದುಕೊಂಡ ಬಳಿಕ ಸೈಕಲ್ ನನ್ನ ಪಾಲಾಯ್ತು. ಎರಡು ರಾಡ್‌ಗಳ ಮಧ್ಯೆ ಕಾಲು ತೂರಿಸಿ ಸೈಕಲ್ ಕಲಿಕೆ ಮುಂದಾಗಿ ಮುಂದಿನ ಸೀಟ್ ಏರಿ ಸೈಕಲ್ ಸವಾರಿ ನಡೆಸತೊಡಗಿದೆ. ನಾನು ತುಂಬಾ ಗಿಡ್ಡವಾಗಿರುವ ಕಾರಣ ಸೀಟ್‌ನ ಮೇಲೆ ಕುಳಿತರೇ ಪೆಡಲ್‌ಗೆ ಕಾಲು ನಿಲುಕ್ತಾಯಿರಲಿಲ್ಲ. ಹಾಗಾಗಿ ನಾನು ಎಷ್ಟೋ ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದು ಇದೆ. ಕೊನೆಗೆ ಸೈಕಲ್ ಓಡಿಸುವುದು ಕಲಿತೆ. ಅಟ್ಲಾಸ್ ಸೈಕಲ್‌ನೊಂದಿಗೆ ನನ್ನದು ಎಂದೂ ಮರೆಯದ ಬಂಧ.
ರಂಗು ರಂಗಾದ ರಿಬ್ಬನ್ ಕಟ್ಟುವುದು, ಪ್ರತಿ ದಿನ ಶುಚಿಗೊಳಿಸುತ್ತ ಅಂಬಾರಿಯಂತೆ ನಾನು ನೋಡಿಕೊಳ್ಳುತ್ತಿದ್ದೆ. ಆದರೆ ಇಂದು ಆ ಅಟ್ಲಾಸ್ ಸೈಕಲ್ ಇಲ್ಲವಾಗಿರುವುದು ನೆನಸಿಕೊಂಡರೆ ಹೃದಯಭಾರವೆನಿಸುತ್ತದೆ.
ಮಹೇಶ ಬಿ. ನಾಯಕ, ಎನ್.ವಿ. ಡಿಗ್ರಿ ಕಾಲೇಜ್, ಕಲಬುರ್ಗಿ