ಅಂದು- ಒಬ್ಬಳೇ ಮಗಳು ಒಂಬತ್ತು ತಿಂಗಳು ಹೊರಿಸಿ, ಹತ್ತೂಂಬತ್ತು ದಿನ ಕಾಯಿಸಿ, ಈ ಭುವಿಗೆ ಬಂದು ಮಡಿಲಲ್ಲಿ ಅತ್ತಾಗ ಅದೇನೋ ಸಂಭ್ರಮ. ಅದುವರೆಗಿನ ದುರ್ಭರ ನೋವೆಲ್ಲ ಮಾಯ. ಜಗತ್ತನ್ನೇ ಗೆದ್ದಷ್ಟುತಾಯ್ತನದ ಪಾರಮ್ಯ. ಒಂದು ವರ್ಷದ ಮೊಲ್ಲಸ್ನಾನಕ್ಕೆ, ಊಟಕ್ಕೆ ಒಲ್ಲೆ ಎಂದಾಗ ಮಗ್ಗಲುಹಾಕುವಾಗ, ಅಂಬೆಗಾಲಿಡುವಾಗ, ಮುಗ್ಗರಿಸಿ ಮೊಂಡು ಮೂಗನ್ನು ಜಜ್ಜಿಸಿಕೊಂಡಾಗ, ಉದ್ದಿನವಡೆ ಬೇಕೆಂದು ಹಠ ಹಿಡಿದು ತರಿಸಿ ಅದರಲ್ಲಿನ ಮೆಣಸಿನಕಾಯಿ ತುಂಡು ತಿಂದು,ಬೋರೆಂದು ಅತ್ತು ಊರು ಒಂದಾಗಿಸಿದಾಗ ನನ್ನ ಕಂಗಳು ಕೊಳಗಳಾಗುತ್ತಿದ್ದವು.
ಗೊಂಬೆ ಆಟ, ಮೂರುಗಾಲಿ ಸೈಕಲ್, ಹಾವು ಏಣಿಯಾಟ, ಕೇರಂ,ಕಣ್ಣಾಮುಚ್ಚಾಲೆ, ಕಳ್ಳ- ಪೊಲೀಸ್, ಕವಡೆ, ಅಳಗುಳಿಮಣೆ, ಪಗಡೆ ಇತರೆ ಆಗಿನ ಜನಪ್ರಿಯಮಕ್ಕಳ ಆಟಗಳೆಲ್ಲವೂ ಇಷ್ಟ. ಸಂಜೆ ಕತ್ತಲಾದೊಡನೆಕೈಕಾಲು ತೊಳೆದು ದೇವರ ಮನೆಯ ಮುಂದೆಕುಳಿತು ಜಯ ಜಯ ರಾಮ, ಸೀತಾ ರಾಮಅಥವಾ ಪೂಜ್ಯಾಯ ರಾಘವೇಂದ್ರಾಯ ಅಥವಾಗಜಮುಖನೇ ಗಣಪತಿಯೇ ಹಾಡುವಾಗ ಮಗಳ ಮೊಗದಲ್ಲಿ ಅದೆಂಥ ಭಕ್ತಿಭಾವ! ರಾತ್ರಿ ಮಲಗುವಾಗ ಎದೆಗೆ ಆನಿಸಿಕೊಂಡು ಮೊಸಳೆ ಕಥೆ, ಮಹಾಭಾರತ, ರಾಮಾಯಣ, ಈಸೋಪನ ನೀತಿ ಕಥೆಗಳನ್ನು ಕೇಳಿಯೇ ನಿದ್ದೆಮಾಡಬೇಕು. ಮಗಳು ದೊಡ್ಡವಳಾದದ್ದೇ ಗೊತ್ತಾಗಲಿಲ್ಲ. ಕಾಲೇಜು, ಸಾಫ್ಟ್ ವೇರ್ ಉದ್ಯೋಗ,ವಧು ಪರೀಕ್ಷೆ, ವಿವಾಹಎಲ್ಲವೂ ಕ್ಷಣಾರ್ಧವೇನೋಎಂಬಂತೆ ಸಲೀಸು. ಸುಂದರ ಕನಸುಗಳು,ಸಾಕಾರಗೊಂಡ ನನಸುಗಳು.
***
ಇಂದು-ಇಂದಿನ ಮಕ್ಕಳೇ ಹೀಗೆ ಅಂತ ಕಾಣುತ್ತೆ.ಪ್ರಚಂಡ ತಲೆ! ಬಾತ್ ಟಬ್ಬಿನಲ್ಲಿಯೇ ಸ್ನಾನ, ಬೇಬಿಶಾಂಪೂ, ಡೈಪರ್, ಮಸಾಜ್ ಆಯಿಲ್, ಮಾಯಿಶ್ಚಯಿರಿಂಗ್ ಲೋಶನ್, ಬೇಬಿ ಪೌಡರ್, ಒಂದೇ ಎರಡೇ! ಹಾಲು ಕುಡಿಯಲು ಫೀಡಿಂಗ್ ಬಾಟಲಿ ಇಲ್ಲದಿದ್ದರೆ ಆಗದು. ಮಗ್ಗಲುಹಾಕಿದಾಕ್ಷಣ ಬೇಬಿ ಪರದೆ ಬೇಕು.ಅಂಬೆಗಾಲಿಡಲಾರಂಭಿಸಿದರೆ ವಾಕರ್ ರೆಡಿ.ಕುಳಿತುಕೊಂಡರೆ ಎದುರಿಗೆ ಟಿ.ವಿ.ಆನ್‌ಆಗಿರಬೇಕು. 2 ವರ್ಷ ತುಂಬುತ್ತಲೇ ಮೊಬೈಲ್‌ಗಾಗಿ ರಚ್ಚೆ ಹಿಡಿಯುತ್ತವೆ. ಸೈಕಲ್, ಆಟದ ಕಾರುಕೊಡಿಸಲು ಹಠ. ವಯಸ್ಸಿಗೆ ಮೀರಿ ಮಾತನಾಡುತ್ತವೆ!
ಈಗ ಹೇಳುತ್ತಿರುವುದು ನನ್ನ ಮೊಮ್ಮಗಳೂ ಸೇರಿಇಂದಿನ ಅಸಂಖ್ಯ ಮಕ್ಕಳ ಕಥೆ! ಅವರ ಅಮ್ಮ ತಿಂಡಿತಿನ್ನಿಸಬೇಕಾದರೆ ಟಿ.ವಿಯಲ್ಲಿ ಪೋಗೋಇಡಬೇಕು. ಊಟಕ್ಕೆ ಚಿಂಟೂ, ರಾತ್ರಿ ಊಟಕ್ಕೆ ಅವರು ಕೇಳಿದ್ದೇ ಆಗಬೇಕು. ನಾವೆಲ್ಲ ಪಾರ್ಲೆಜಿ, ಶುಂಠಿ ಪೆಪ್ಪರ್ಮೆಂಟ್, ನಿಂಬೆಹುಳಿ, ಹುಣಸೆಕುಟ್ಟುಂಡೆ ತಿಂದು ಬೆಳೆದವರು. ಇಂದಿನ ಮಕ್ಕಳಿಗೆಲೇಸ್, ಚಾಕೋಸ್, ಕಿಂಡರ್ ಜಾಯ್, ಕಿಸ್ಮಿಸ್, ಅದೇನೋ ಪಿಜ್ಜಾ ಅಂತೆ, ಬರ್ಗರ್ ಅಂತೆ, ಎಲ್ಲವೂ ಆರೋಗ್ಯ ಹಾಳು ಮಾಡುವಂಥವೇ. ಮುಖ್ಯವಾಗಿ ಕಂಡದ್ದೆಲ್ಲ ಬೇಕು. ಪೋಷಕರೂ ಅಷ್ಟೇ: ಕೇಳಿದ್ದನ್ನೆಲ್ಲ ಕೊಡಿಸುತ್ತಾರೆ. 5 ವರ್ಷವಾಗುತ್ತಲೇ ಠಸ್ಪುಸ್ ಎಂದು ಆ ಸುಡುಗಾಡು ಇಂಗ್ಲಿಷಿನಲ್ಲಿ ಮಾತನಾಡುತ್ತವೆ. ಕನ್ನಡ ಮಾಧ್ಯಮದಲ್ಲಿ ಓದಿದನಮಗೆ ಅದು ಅರ್ಥವಾಗುವುದಾದರೂ ಹೇಗೆ? ನೀನು ಹೇಳುವುದು ನನಗೆ ಗೊತ್ತಾಗಲಿಲ್ಲ ಕಣಪ್ಪಾ ಅಂದರೆ-ಅಯ್ಯೋ, ಅಮ್ಮಮ್ಮ ಇಂಗ್ಲಿಷ್ ಕಲಿ… ಎನ್ನುತ್ತಾಳೆ ನನ್ನ ಮುದ್ದಿನ ಮೊಮ್ಮಗಳು.
ಮೊನ್ನೆಬಿಡುವಿದ್ದಾಗ ಶಾಲೆಯಲ್ಲಿ ಕಲಿತ ಒಂದು ಪದ್ಯ ಹೇಳೇ ಎಂದಾಗ ಏನಂದಳು ಗೊತ್ತಾ?ಅಮ್ಮಮ್ಮ, ಅದು ಇಂಗ್ಲಿಷ್‌ನಲ್ಲಿರೋದು,ನಿಮಗೆ ಗೊತ್ತಾಗೊಲ್ಲ ಬಿಡಿ – ಈ ಉತ್ತರ ಕೇಳಿಕೆನ್ನೆಗೆ ಛಟೀರನೆ ಬಾರಿಸಿದಂತೆ ಆಯ್ತು. ಆದರೆ ಆಮಾತೂ ಸತ್ಯವೇ ಅಲ್ಲವೆ? ಕಾಲಾಯ ತಸ್ಮೈ ನಮಃ, ನಿಜ, ಕಾಲ ಬದಲಾಗಿದೆ,ಜನ ಸಂಕುಲ ಬದಲಾಗಿದೆ. ಜೀವನದೊಂದಿಗೆನಾವೂ ಬದಲಾಗಬೇಕಾಗಿದೆ. ಬದಲಾಗೋಣ, ಬದಲಾಗುತ್ತಿರುವ ಮಗಳ ಕಾಲಕ್ಕೂ ಮೊಮ್ಮಗಳ ಕಾಲಕ್ಕೂ ಅಜಗಜಾಂತರ!
-ಕೆ.ಲೀಲಾ ಶ್ರೀನಿವಾಸ್