ಮಂಡ್ಯ: ಮಕ್ಕಳ ಸುಧಾರಣೆ ಹಾಗೂ ಅಡ್ಡದಾರಿಯಿಂದ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಬಾಲನ್ಯಾಯ ಮಂಡಳಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾ. ಎನ್.ಡಿ.ಮಾಲಾ ತಿಳಿಸಿದರು.
ತಾಲೂಕಿನ ಹೊಡಾಘಟ್ಟ ಗ್ರಾಪಂ ಆವರಣದಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹೊಡಾಘಟ್ಟ ಗ್ರಾಪಂ ವತಿಯಿಂದ ಮಹಿಳಾ ದಿನ ಮತ್ತು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ದತ್ತು ಪ್ರಕ್ರಿಯೆ ಬಗ್ಗೆ ಬಾಲನ್ಯಾಯ ಕಾಯಿದೆ 2015 ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ರಾಜಮೂರ್ತಿ ಮಾತನಾಡಿ, ಮಾನವ ಸಂಪನ್ಮೂಲ ಅಭಿವೃದ್ಧಿಯಾದರೆ ಕುಟುಂಬ, ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಎಲ್ಲವೂ ಹಂತಹಂತವಾಗಿ ಅಭಿವೃದ್ಧಿಯಾಗುತ್ತವೆ ಎಂದರು. ಉತ್ತಮ ಪ್ರಜೆಯಾಗಿ ಮಕ್ಕಳನ್ನು ಬೆಳೆಸಬೇಕು. ಅವರಿಗೆ ಕಾನುನೂ, ಶಿಕ್ಷಣ, ಆರೋಗ್ಯ ಎಲ್ಲದರ ಬಗ್ಗೆಯೂ ತಿಳುವಳಿಕೆ ಮೂಡಿಸಬೇಕು. ಅವರನ್ನು ತಿದ್ದಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತಾರೆ ಎಂದರು.
ಹೆಣ್ಣು ಭ್ರೂಣಹತ್ಯೆ ಸಾಮಾಜಿಕ ಪಿಡುಗು: ಬಾಲ್ಯ ವಿವಾಹಗಳು ಹೆಚ್ಚೆಚ್ಚು ನಡೆಯುತ್ತಿವೆ. ಹೆಣ್ಣು ಭ್ರೂಣಹತ್ಯೆ ಮಾಡುತ್ತಾರೆ. ಭ್ರೂಣ ಲಿಂಗಪತ್ತೆ ಮಾಡುತ್ತಾರೆ. ಇದೂ ಒಂದು ಸಾಮಾಜಿಕ ಪಿಡುಗಾಗಿದ್ದು, ಮಂಡ್ಯ ಜಿಲ್ಲೆಯಲ್ಲೂ ಗೊತ್ತಿಲ್ಲದಂತೆ ಹೆಣ್ಣು ಭ್ರೂಣ ಹತ್ಯೆಗಳು ನಡೆದಿವೆ. ಇವು ಹೆಚ್ಚು ವರದಿಯಾಗುತ್ತಿಲ್ಲ ಎಂದು ವಿಷಾದಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ವರದರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ಬಸವರಾಜು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ವಿಜಯಪ್ರಸಾದ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯೋಗೇಶ್, ಕೀಲಾರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಶಿವಪ್ರಸಾದ್, ಹೊಡಾಘಟ್ಟ ಗ್ರಾಪಂ ಆಡಳಿತಾಧಿಕಾರಿ ಡಾ.ಚಂದ್ರಶೇಖರ್, ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್‌ಚಂದ್ರಗುರು, ಬಡ್ಸ್ ಸಂಸ್ಥೆಯ ವೆಂಕಟೇಶ್, ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಇತರರಿದ್ದರು.
ಬಾಲಾಪರಾಧಿಗಳ ರಕ್ಷಣೆ ಕಾಯ್ದೆ ಉದ್ದೇಶ: 18 ವರ್ಷದೊಳಗಿರುವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಅಂಥ ಮಕ್ಕಳನ್ನು ಬಾಲಾಪರಾಧಿಗಳು ಎಂದು ಪರಿಗಣಿಸಲಾಗುತ್ತದೆ. ಅವರನ್ನು ನೋಡಿಕೊಳ್ಳಲು ಪೊಲೀಸ್ ಠಾಣೆಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಗಿರುತ್ತದೆ. ಠಾಣೆಗಳಲ್ಲಿ ಓರ್ವರನ್ನು ವಿಶೇಷ ಸಂರಕ್ಷಣಾಧಿಕಾರಿಯನ್ನಾಗಿ ನೇಮಿಸಿಕೊಂಡು ಅವರೇ ಬಾಲಪರಾಧಿಗಳನ್ನು ಮಾತನಾಡಿಸಬೇಕು. ಅವರು ಮಾತನಾಡಿಸುವಾಗ ಸಮವಸ್ತ್ರ ಧರಿಸಿರಬಾರದು. ಅವರಿಗೆ ಭಯದ ವಾತಾವರಣಸೃಷ್ಟಿಸಬಾರದು. ಬಾಲಾಪರಾಧಿಗಳು ತಪ್ಪು ಮಾಡಿದ್ದೇ ಆದಲ್ಲಿ ಅವರನ್ನು ತಿದ್ದಿ ಮನಪರಿವರ್ತಿಸುವುದೇಕಾಯ್ದೆಯ ಉದ್ದೇಶವಾಗಿದೆ ಎಂದು ನ್ಯಾ, ಮಾಲಾ ತಿಳಿಸಿದರು.