Advertisement

ಸರ್ಕಾರಿ ಶಾಲೆಗಳತ್ತ ಮಕ್ಕಳ ಗುಳೆ!

05:34 PM Sep 05, 2020 | Suhan S |

ಬೀದರ: ಹೆಮ್ಮಾರಿ ಕೋವಿಡ್ ಸೋಂಕಿನಿಂದ ಎದುರಾದ ಆರ್ಥಿಕ ಸಂಕಷ್ಟದಿಂದಾಗಿ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಗಡಿ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳತ್ತ ವ್ಯಾಮೋಹ ಹೊಂದಿದ್ದ ಪಾಲಕರು ಇದೀಗ ಆರ್ಥಿಕ ಹೊರೆ ಜತೆಗೆ ಸೌಕರ್ಯಗಳ ಹಿನ್ನೆಲೆ ಸರ್ಕಾರಿ ಶಾಲೆಗಳತ್ತ ಮುಖ ಮಾಡಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್‌ ಕೆಜಿ, ಯುಕೆಜಿ ಪ್ರಾರಂಭಿಸಲು ಸರ್ಕಾರ ನಿರ್ಣಯಿಸಿರುವುದರಿಂದ ಮಕ್ಕಳ ಪ್ರವೇಶಾತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

Advertisement

ಕೋವಿಡ್‌-19ನಿಂದ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ನೇರ ಪರಿಣಾಮ ಬೀರಿದ್ದು, ಶುಲ್ಕಕ್ಕಾಗಿ ರಕ್ತ ಹೀರುವ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಆರ್ಥಿಕ ಸಂಕಷ್ಟ ಎದುರಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶುಲ್ಕದ ಅಥವಾ ಹೆಚ್ಚುವರಿ ಶುಲ್ಕದ ಯಾವುದೇ ಕಿರಿಕಿರಿ ಇಲ್ಲ. ಹಾಗಾಗಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದವರೇ ಈಗ ಆ ಶಾಲೆಗಳ ಬಾಗಿಲು ತಟ್ಟುತ್ತಿದ್ದಾರೆ. ಅಷ್ಟೇ ಅಲ್ಲ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಈಗಾಗಲೇ ಓದುತ್ತಿರುವ ಮಕ್ಕಳನ್ನು ಸಹ ಸರ್ಕಾರಿ ಶಾಲೆಗಳಿಗೆ ವರ್ಗಾವಣೆ ಮಾಡಿಸುವತ್ತ ಒಲವು ತೋರಿದ್ದಾರೆ.

ಬೀದರ ಜಿಲ್ಲೆಯಲ್ಲಿ ಪ್ರತಿ ವರ್ಷ ಶಾಲೆಗಳು ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳತ್ತ ಮಕ್ಕಳು, ಪಾಲಕರು ಹೆಜ್ಜೆ ಇಡುತ್ತಿದ್ದರು. ಈ ವರ್ಷವೂ ಕೋವಿಡ್‌ ನಿಯಮದಂತೆ ಆನ್‌ ಲೈನ್‌ ಮೂಲಕ ತರಗತಿ ನಡೆಸುತ್ತಿದ್ದು, ಈ ಕಾರಣಕ್ಕೆ ಹೆಚ್ಚುವರಿ ಶುಲ್ಕವನ್ನೂ ವಸೂಲಿ ಮಾಡುತ್ತಿವೆ. ಶುಲ್ಕದ ಹೊರೆ ಜತೆಗೆ ಆನ್‌ ಲೈನ್‌ ಶಿಕ್ಷಣಕ್ಕೆ ಅಗತ್ಯವಿರುವ ಸ್ಮಾರ್ಟ್‌ಫೋನ್‌ ಖರೀದಿ ಆರ್ಥಿಕ ಬರೆ ಹಾಕಿದಂತಾಗಿದೆ. ಈ ಮಧ್ಯೆ ನೆಟ್‌ವರ್ಕ್‌ ಸಮಸ್ಯೆಯೂ ಕಾಡುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಇದ್ಯಾವ ಕಿರಿಕಿರಿಯೂ ಇಲ್ಲ. ವಿದ್ಯಾಗಮ, ವಠಾರ ಶಾಲೆಗಳನ್ನು ಪ್ರಾರಂಭಿಸಿರುವುದರಿಂದ ಪೋಷಕರು ಖಾಸಗಿ ಶಾಲೆಗಳನ್ನು ತೊರೆಯುತ್ತಿದ್ದಾರೆ.

ಇನ್ನು ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕೆ ಮತ್ತು ಫಲಿತಾಂಶವೂ ದಾಖಲಾಗುತ್ತಿದೆ. ಬಿಸಿಯೂಟ, ಬಟ್ಟೆ, ಪುಸ್ತಕ, ಶೂ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮಕ್ಕಳ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಈ ಶಾಲೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ 2020-21ನೇ ಸಾಲಿಗೆ ಮೊದಲ ತರಗತಿಗೆ 7083 ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಅನುದಾನಿತ ಶಾಲೆಗಳಲ್ಲಿ 2121 ಮಕ್ಕಳು ಮತ್ತು ಖಾಸಗಿ ಶಾಲೆಗಳಲ್ಲಿ 3312 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಮಕ್ಕಳ ದಾಖಲಾತಿ ಹೆಚ್ಚಳವಾಗಿರಲಿಲ್ಲ. ಆದರೆ, ಈಗ ಕೋವಿಡ್ ತಂದ ಆರ್ಥಿಕ ಮುಗ್ಗಟ್ಟಿನಿಂದಾಗಿ ಪಾಲಕರು ಸರ್ಕಾರಿ ಶಾಲೆಗಳತ್ತ ಆಸಕ್ತಿ ವಹಿಸುವಂತೆ ಮಾಡಿದೆ. ಸರ್ಕಾರ ಈ ಬದಲಾವಣೆಯ ಲಾಭ ಪಡೆದುಕೊಂಡು ಇತರ ಮಕ್ಕಳಂತೆ ಇಲ್ಲಿಯೂ ಸಮಾನಾಂತರ ಶಿಕ್ಷಣ, ಅಗತ್ಯ ಸೌಲತ್ತುಗಳನ್ನು ಒದಗಿಸಬೇಕಿದೆ. ಆ ಮೂಲಕ ಪಾಲಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಿದೆ.

ಬೀದರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ವರ್ಷ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಖಾಸಗಿ ಶಾಲೆಗಳ ಮಕ್ಕಳನ್ನು ಸಹ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಗುಣಾತ್ಮಕ ಶಿಕ್ಷಣಕ್ಕೆ ಒತ್ತು, ಉತ್ತಮ ಫಲಿತಾಂಶದ ಜತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತಿರುವುದರಿಂದ ಪಾಲಕರು ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎನ್ನಬಹುದು. -ಎಚ್‌.ಸಿ. ಚಂದ್ರಶೇಖರ, ಡಿಡಿಪಿಐ, ಬೀದರ

Advertisement

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next