Advertisement

ಚನ್ನಮ್ಮನ ಕಿತ್ತೂರಲ್ಲಿ ಗಮನ ಸೆಳೆದ ಮಕ್ಕಳ ಸಂತೆ

12:16 PM Dec 22, 2019 | Team Udayavani |

ಚನ್ನಮ್ಮನ ಕಿತ್ತೂರ: ಪಟ್ಟಣದ ಕೊಂಡವಾಡ ಚೌಕನಲ್ಲಿರುವ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅದ್ಧೂರಿಯಿಂದ ನಡೆಯಿತು.

Advertisement

ಶನಿವಾರ ಶಾಲೆ ಕ್ರೀಡಾಂಗಣದಲ್ಲಿ ಮಕ್ಕಳಿಗೆ ವ್ಯವಹಾರದ ಶಿಕ್ಷಣ ನೀಡುವ ದೃಷ್ಟಿಯಿಂದ ಶಿಕ್ಷಕರು ಮಕ್ಕಳ ಸಂತೆ ಆಯೋಜಿಸಿದ್ದರು. ಸಂತೆಯಲ್ಲಿ 250 ವಿದ್ಯಾರ್ಥಿಗಳು ಪಾಲ್ಗೊಳ್ಳುವುದಲ್ಲದೆ ವಿವಿಧ ತರಕಾರಿ ಮಾರಿ ಗಮನ ಸೆಳೆದರು. ಸಂತೆಯಲ್ಲಿ ಗಮನ ಸೆಳೆದ ಕಬ್ಬಿನ ಹಾಲು, ಮಸಾಲಾ ಚುರುಮುರಿ-ಮಜ್ಜಿಗೆ, ಶಿರಸಿ ಅವಲಕ್ಕಿ ಹೆಚ್ಚಿನ ಗ್ರಾಹಕರನ್ನು ಸೆಳೆದವು. ಅವುಗಳನ್ನು ಖರೀದಿಸಿ ಆಸ್ವಾದಿಸಿದ ಗ್ರಾಹಕರು ವಿದ್ಯಾರ್ಥಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ವ್ಯಾಪಾರ-ವಹಿವಾಟುಗಳಲ್ಲಿರುವ ಲಾಭಾಂಶ ಕಂಡುಕೊಂಡ ಮಕ್ಕಳು ಸಂತೆಯಲ್ಲಿ ಸ್ಥಳೀಯರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರು. ವಿವಿಧ ಖಾದ್ಯದ ರುಚಿ ಗ್ರಾಹಕರಿಗೆ ನೀಡಿದ್ದಲ್ಲದೇ ಶುದ್ಧ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಗ್ರಾಹಕರಲ್ಲಿ ಮನವಿ ಮಾಡಿದರು.

ಚಿಣ್ಣರ ಸಂತೆಯಲ್ಲಿರುವ ವಿವಿಧ ಬಗೆಯ ತರಕಾರಿ, ವಸ್ತುಗಳನ್ನು ಅಧಿ ಕಾರಿಗಳು, ಶಿಕ್ಷಕರು, ಮಕ್ಕಳ ಪಾಲಕರು ಖರೀದಿಸುವ ಮೂಲಕ ಚಿಣ್ಣರ ಸಂತೆಗೆ ಮೆರಗು ತಂದರು.

ಈರುಳ್ಳಿ ಬಿಸಿ: ಈರುಳ್ಳಿ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಬೆಲೆ ಬಿಸಿ ಚಿಣ್ಣರ ಸಂತೆಗೆ ತಟ್ಟಿದೆ. ಆದರೆ ಸಂತೆಯಲ್ಲಿ ಎಲ್ಲ ಖಾದ್ಯ ಹಾಗೂ ತರಕಾರಿಗಳ ಬೆಲೆಯೂ ಕೈಗೆಟುಕುವಂತಿತ್ತು.

Advertisement

ಹೀಗಾಗಿ ಸಂತೆಗೆ ಬಂದ ಸ್ಥಳೀಯರು ಹಾಗೂ ಪಾಲಕರು ಈರುಳ್ಳಿ ಕೊಂಡುಕೊಳ್ಳಲು ಹುಡುಕಾಟ ನಡೆಸಿದರಾದರೂ ಬೆಲೆ ಏರಿಕೆ ಬಿಸಿಯೂ ಇಲ್ಲಿಯೂ ತಟ್ಟಿದ ಪರಿಣಾಮ ಚಿಣ್ಣರ ಸಂತೆಯಲ್ಲಿ ಈರುಳ್ಳಿ ಕಂಡು ಬರಲಿಲ್ಲ. ಈ ಸಂದರ್ಭದಲ್ಲಿ ಬಿಇಒ ರವೀಂದ್ರ ಬಳಿಗಾರ, ನೌಕರರ ಸಂಘದ ತಾಲೂಕಾಧ್ಯಕ್ಷ ಐ.ಜಿ. ಚಿನ್ನಣ್ಣವರ, ಮುಖ್ಯೋಪಾಧ್ಯಾಯ ಎಂ.ಎಫ್‌. ಜಕಾತಿ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಜಡಗೇರಿ ಸೇರಿದಂತೆ ಎಲ್ಲ ಸದಸ್ಯರು, ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next